ಜನರ ಲಸಿಕೆ ಬಿಜೆಪಿ ಕಾರ್ಯಕರ್ತರಿಗೆ- ಶಾಸಕ ಎಸ್. ರಘು ವಿರುದ್ಧ ದುರ್ಬಳಕೆ ಆರೋಪ!
ಬೆಂಗಳೂರು: ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆಡ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಸಿ.ವಿ.ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ರಘು ಅವರ ವಿರುದ್ಧವೂ ಲಸಿಕೆ ದುರ್ಬಳಕೆ ಆರೋಪ ಕೇಳಿಬಂದಿದೆ.
ಭುವನೇಶ್ವರಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕಿದ್ದ ಲಸಿಕಾ ಕಾರ್ಯಕ್ರಮ ವನ್ನು ರದ್ದುಗೊಳಿಸಿ, ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅವರ ಸಂಬಂಧಿಕರಿಗೆ ಲಸಿಕೆ ಹಾಕಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈಸಂಬಂಧ ಲಸಿಕಾ ಕೇಂದ್ರದ ಮುಂದೆ ಮಂಗಳವಾರ ಪ್ರತಿಭಟನೆಯೂ ನಡೆದಿದೆ.
ಲಸಿಕಾ ಕೇಂದ್ರಕ್ಕೆ ಸಿಬ್ಬಂದಿಗಳು ಟೋಕನ್ ನೀಡಿ ಬೆಳಿಗ್ಗೆ 9.45ಕ್ಕೆ ಬರುವಂತೆ ತಿಳಿಸಿದ್ದರು. ಇದರಂತೆ ಪೋಷಕರೊಂದಿಗೆ 9.45ಕ್ಕೆ ತೆರಳಿದ್ದೆ. 10.30ರವರೆಗೂ ಕಾದು ಕುಳಿದಿದ್ದೆವು. ಬಳಿಕ ಸಿಬ್ಬಂದಿಗಳು ಲಸಿಕೆಯನ್ನು ಇಲ್ಲಿ ನೀಡಲಾಗುವುದಿಲ್ಲ. ತಿಪ್ಪಸಂದ್ರ ದಲ್ಲಿರುವ ಶ್ರೀ ಶಕ್ತಿ ಗಣಪತಿ ಕಲ್ಯಾಣ ಮಂಟಪದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಬಳಿಕ ಪೋಷಕರೊಂದಿಗೆ ಅಲ್ಲಿಗೆ ತೆರಳಿದಾಗ ಟೋಕನ್ ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳಿದರು. ಅಲ್ಲದೆ, ಇಲ್ಲಿ ಲಸಿಕೆ ನೀಡಲು ಶಾಸಕ ರಘು ಅವರ ಅನುಮತಿ ಬೇಕೆಂದೂ ಹೇಳಿದರು, ಬಳಿಕ ನಾನು ಲಸಿಕೆ ಪಡೆಯದೆಯೇ ಪೋಷಕರೊಂದಿಗೆ ಮನೆಗೆ ವಾಪಸ್ ಆದೆ. ಲಸಿಕೆಯನ್ನು ಸರ್ಕಾರಿ ವೈದ್ಯರೊಂದಿಗೆ ರಾಜಕೀಯ ವ್ಯಕ್ತಿಯೊಬ್ಬರು ನಡೆಸುತ್ತಿರುವ ಖಾಸಗಿ ವೇದಿಕೆಗೆ ಸ್ಥಳಾಂತರಗೊಳ್ಳಲು ಹೇಗೆ ಸಾಧ್ಯ? ಎಂದು ಮಂಜು ಎಂಬುವವರು ಪ್ರಶ್ನಿಸಿದ್ದಾರೆ.
ಸ್ಥಳೀಯ ನಿವಾಸಿ ಕವಿತಾ ಎಂಬುವವರು ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 4 ಗಂಟೆಗೆ ತೆರಳಿದ್ದೆ. 7.15ರವರೆಗೂ ಟೋಕನ್ ಗಾಗಿ ಕಾದು ಕುಳಿದಿದ್ದೆ. ಬೆಳಿಗ್ಗೆ 10 ಗಂಟೆಯಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಬಳಿಕ ಮದುವೆ ಮಂಟಪವೊಂದರಲ್ಲಿ ಲಸಿಕೆನೀಡಲಾಗುತ್ತಿದೆ ಎಂದು ಹೇಳಿದ್ದರು. ಅಲ್ಲಿಗೆ ತೆರಳಿ ಒಂದುವರೆ ಗಂಟೆಗಳ ಕಾಲ ಕಾದಿದ್ದೆ. ಬಳಿಕ ಅಲ್ಲಿ ಲಸಿಕೆ ನೀಡುವುದಿಲ್ಲ ಎಂದು ತಿಳಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಂದೀಶ್ ರೇವಣ್ಣ ಅವರು ಮಾತನಾಡಿ, ಸೋಮವಾರ 200 ಮಂದಿಗೆ ಟೋಕನ್ ನೀಡಲಾಗಿತ್ತು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಲಭ್ಯವಿದ್ದ ಲಸಿಕೆಯನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು. ಪರಿಣಾಮ ಬೆಳಿಗ್ಗೆ 4 ಗಂಟೆಯಿಂದಲೇ ಕಾದು ಕುಳಿದಿತ್ತ ಜನರಿಗೆ ಬೇಸರವಾಗಿತ್ತು. ಕಲ್ಯಾಣ ಮಂಟಪದಲ್ಲಿ ನಡೆಸಬೇಕಿದ್ದ ಲಸಿಕಾ ಕಾರ್ಯಕ್ರಮವನ್ನು ಮರುದಿನ ಬೇಕಾದರೂ ನಡೆಸಬಹುದಿತ್ತು. ಶಾಸಕ ರಘು ಅವರ ಹೆಸರಿನಲ್ಲೇಕೆ ಲಸಿಕೆಯನ್ನು ವಿತರಿಸಲಾಯಿತು? ಎಂದು ಪ್ರಶ್ನಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಲಸಿಕಾ ಕೇಂದ್ರಗಳಿಗೆ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.