ಉಡುಪಿ, ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡುತ್ತಿದೆ: ಕೆಪಿಸಿಸಿ ವಕ್ತಾರ ರಾಠೋಡ ಗಂಭೀರ ಆರೋಪ
ಬೆಂಗಳೂರು ಜೂ. 2: ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಮಾಡುತ್ತಿರುವ ಟಾಸ್ಕ್ ಫೋರ್ಸ್ ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡುತ್ತಿದೆ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಒತ್ತಡ ಹೇರಿ ಟಾಸ್ಕ್ ಪೋರ್ಸ್ ಮೂಲಕ ಈ ರೀತಿಯ ತಾರತಮ್ಯ ನಡೆಯುತ್ತಿದೆ. ಉಡುಪಿ, ಬೆಂಗಳೂರು, ಮಂಗಳೂರಿನಲ್ಲಿಯೂ ಇದೇ ತರಹ ನಡೆಯುತ್ತಿದ್ದು ಇದರಿಂದ ದೊಡ್ಡ ಸಮಸ್ಯೆ ಉಂಟಾಗುತ್ತಿದೆ, ಪ್ರತಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನೇಮಿಸಿರುವ ಟಾಸ್ಕ್ ಪೋರ್ಸ್ ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ಕೊಡುವುದನ್ನು ಕೂಡಲೇ ನಿಲ್ಲಿಸಿ ಎಲ್ಲರಿಗೆ ಪಾರದರ್ಶಕ ವಾಗಿ ಲಸಿಕೆ ನೀಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕೋವಿಡ್ ನಿಂದ ಮರಣ ಹೊಂದಿದವರ ಕುಟುಂಬಗಳಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮೃತರ ಕುಟುಂಬಕ್ಕೆ ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರ 10 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸಿದರು. ಇದರೊಂದಿಗೆ, ಕೋವಿಡ್ ನಿಂದ ಮರಣಹೊಂದಿದ ಅನಾಥ ಮಕ್ಕಳಿಗೆ 23 ವರ್ಷದ ನಂತರ 10 ಲಕ್ಷ ರೂ ನೀಡುತ್ತೇವೆ ಎಂಬ ಕೇಂದ್ರ ಸರಕಾರದ ಘೋಷಣೆಗೆ ಪ್ರತಿಕ್ರಿಯೆ ನೀಡಿರುವ ಅವರು, 23 ವರ್ಷದವರೆಗೂ ಈ ಪ್ರಧಾನ ಮಂತ್ರಿ ಇರುತ್ತಾರೋ ? ಇಲ್ಲವೋ? ಎಂದು ಟೀಕಿಸಿದರು. ಅಲ್ಲದೆ ಇಂತಹ ಅವೈಜ್ಞಾನಿಕ ನಿಯಮವನ್ನು ಮಾಡಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ.
ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿಗೆ ಪತ್ರ ಬರೆದು ಅನಾಥ ಮಕ್ಕಳಿಗೆ ಕೇಂದ್ರಿಯ ವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿದ್ದು, ಇದನ್ನು ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದರು.