ಲಸಿಕೆ ವಿತರಣೆ – ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ, ದೇಶದಲ್ಲಿ 6ನೇ ಸ್ಥಾನ
ಬೆಂಗಳೂರು: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕೇರಳ, ಆಂಧ್ರ, ತಮಿಳುನಾಡಿಗಿಂತ ಕರ್ನಾಟಕ ಮುಂದಿದೆ. ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.
ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿ, ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ .1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳ್ಳುತ್ತಿರುವುದರಿಂದ, ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ಶನಿವಾರ 80,000 ಡೋಸ್ ಕೋವಾಕ್ಸಿನ್ ಹಾಗೂ 2,17,310 ಡೋಸ್ ಕೊವಿಶೀಲ್ಡ್ ಪೂರೈಸಿದ ಕೇಂದ್ರಕ್ಕೆ ಧನ್ಯವಾದ ಹೇಳಿದ್ದಾರೆ.
ಟಾಪ್ 10 ರಾಜ್ಯಗಳು: ಮಹಾರಾಷ್ಟ್ರ 2.9 ಕೋಟಿ, ಉತ್ತರ ಪ್ರದೇಶ 1.77 ಕೋಟಿ, ರಾಜಸ್ಥಾನ 1.66 ಕೋಟಿ, ಗುಜರಾತ್ 1.65 ಕೋಟಿ, ಪಶ್ಚಿಮ ಬಂಗಾಳ 1.40 ಕೋಟಿ, ಕರ್ನಾಟಕ 1.32 ಕೋಟಿ, ಮಧ್ಯಪ್ರದೇಶ 1.06 ಕೋಟಿ, ಆಂಧ್ರಪ್ರದೇಶ 94.86 ಲಕ್ಷ, ಕೇರಳ 90.56 ಲಕ್ಷ, ತಮಿಳುನಾಡು 88 ಲಕ್ಷ ಲಸಿಕೆಯನ್ನು ವಿತರಿಸಿದೆ.
ಮೇ 30 ರಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಗಳ ಪ್ರಕಾರ ಕರ್ನಾಟಕದಲ್ಲಿ ಇಲ್ಲಿಯವರೆಗೆ 1,33,96,169 ಲಸಿಕೆಗಳನ್ನು ವಿತರಣೆ ಮಾಡಿದೆ. ಈ ಪೈಕಿ 1,06,69,784 ಮೊದಲ ಡೋಸ್ ಆಗಿದ್ದರೆ 27,26,385 ಎರಡನೇ ಡೋಸ್ ವಿತರಿಸಲಾಗಿದೆ.
18 ರಿಂದ 44 ವರ್ಷ ಒಳಗೆ ಒಟ್ಟು 9,30,855 ಲಸಿಕೆ ನೀಡಲಾಗಿದೆ. 45 ವರ್ಷ ಮೇಲಟ್ಟವರಿಗೆ 84,14,335 ಮೊದಲ ಡೋಸ್, 20,45,079 ಎರಡನೇ ಡೋಸ್ ನೀಡಲಾಗಿದೆ