7 ವರ್ಷದ ಆಡಳಿತ: ದೇಶವನ್ನು ಬಿಜೆಪಿ ಕಮರಿಗೆ ತಳ್ಳಿದೆ- ಕಾಂಗ್ರೆಸ್

ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಅಘಾಡಿ ಸರ್ಕಾರವು ಭಾನುವಾರ ಮೋದಿ ಸರ್ಕಾರದ 7ನೇ ವರ್ಷದ ವಾರ್ಷಿಕೋತ್ಸವದಂದು ಟೀಕಿಸಿದ್ದು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಜನರ ಮೂಲಭೂತ ಅಗತ್ಯಗಳನ್ನು ಈಡೇರಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಅಧಿಕಾರದಲ್ಲಿ ಏಳು ವರ್ಷ ಪೂರ್ಣಗೊಂಡಿರುವುದನ್ನು ‘ಕರಾಳ ದಿನ’ ಎಂದು ಕರೆದಿದ್ದು, ಕೇಂದ್ರವು ದೇಶವನ್ನು ಕೋವಿಡ್-19 ಬಿಕ್ಕಟ್ಟಿನ ‘ಕಮರಿಗೆ’ ತಳ್ಳಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆರೋಪಿಸಿದೆ.

ಮಹಾ ವಿಕಾಸ ಅಘಾಡಿ (ಎಂವಿಎ) ಯ ಭಾಗವಾಗಿ ಮಹಾರಾಷ್ಟ್ರದ ಶಿವಸೇನೆ ಮತ್ತು ಎನ್‌ಸಿಪಿ ಜೊತೆ ಅಧಿಕಾರ ಹಂಚಿ ಕೊಂಡಿರುವ ಕಾಂಗ್ರೆಸ್, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವು ಎಲ್ಲಾ ರಂಗಗಳಲ್ಲೂ ವಿಫಲ ವಾಗಿದ್ದು, ಅಧಿಕಾರದಲ್ಲಿ ಮುಂದುವರಿಯಲು ಪ್ರಧಾನಿ ಮೋದಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದೆ.

ಮೋದಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಲು ಜನರು ಮುಂದೆ ಬರಬೇಕು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುವ ಮೂಲಕ ಕೈಜೋಡಿಸಬೇಕು ಎಂದು ಎನ್‌ಸಿಪಿ ಆಗ್ರಹಿಸಿದೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವುತ್, ‘ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದ ಮನಮೋಹನ್ ಸಿಂಗ್ ಅವರ ಕಾಲಘಟ್ಟದ ಹಿಂದಿನ ಸರ್ಕಾರಗಳ ಒಳ್ಳೆಯ ಕಾರ್ಯಗಳಿಂದ ದೇಶವು ಉಳಿದು ಕೊಂಡಿದೆ’. ಇನ್ನು ಹೆಚ್ಚಿನದನ್ನು ಮಾಡಬೇಕಾಗಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹಣದುಬ್ಬರ, ನಿರುದ್ಯೋಗ ಮತ್ತು ಅಶಾಂತಿಯ ಸಮಸ್ಯೆಗಳು ತಲೆದೋರಿವೆ’ ಎಂದು ಹೇಳಿದರು.

‘ನೀವು ಬಹುಮತ ಪಡೆದಾಗ, ಜನರು ನಿಮಗೆ ನಂಬಿಕೆ ಮತ್ತು ವಿಶ್ವಾಸದಿಂದ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ ಎಂದರ್ಥ. ಜನರ ಅಗತ್ಯತೆಗಳು ಮತ್ತು ಬೇಡಿಕೆಗಳು ಬಹಳ ಕಡಿಮೆ. ಅವರಿಗೆ ಜೀವನೋಪಾಯವಾದ ಆರೋಗ್ಯ ಮತ್ತು ಶಿಕ್ಷಣದ ಜೊತೆಗೆ ಆಹಾರ, ಬಟ್ಟೆ ಮತ್ತು ಆಶ್ರಯದಂತ ಮುಖ್ಯ ಸೌಲಭ್ಯಗಳು ಬೇಕಿರುತ್ತವೆ. ಕಳೆದ ಏಳು ವರ್ಷಗಳಲ್ಲಿ ಇದನ್ನು ಸಾಧಿಸಿದ್ದರೆ ಕೇಂದ್ರ ಸರ್ಕಾರ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಹೆಚ್ಚಿನ ಗಮನ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ. ಪ್ರಧಾನಿ ಮೋದಿ ಅವರಿಗೆ ನಾಯಕತ್ವದ ಸಾಮರ್ಥ್ಯವಿದೆ ಮತ್ತು ಅವರು ದೇಶಕ್ಕೆ ಸರಿಯಾದ ನಿರ್ದೇಶನ ನೀಡುತ್ತಾರೆ ಎಂದು ಭಾವಿಸುತ್ತೇವೆ’ ಎಂದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮೋದಿ ಸರ್ಕಾರದ ಮೇಲೆ ‘ಯಾವುದೇ ಭ್ರಷ್ಟಾಚಾರದ ಆರೋಪ’ ಇಲ್ಲದಿರುವುದು ಒಳ್ಳೆಯದು’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎತ್ತಿರುವ ಕೆಲವು ಸಮಸ್ಯೆಗಳಿಗೆ ಇನ್ನೂ ಉತ್ತರಿಸಲಾಗಿಲ್ಲ. ಕೇಂದ್ರವು ಎಲ್ಲಾ ರಾಜ್ಯಗಳ ‘ರಕ್ಷಕ’ನಾಗಿದ್ದು, ನಿಮ್ಮ ಸ್ವಂತ ಮಕ್ಕಳಂತೆ ಎಲ್ಲಾ ರಾಜ್ಯಗಳನ್ನು ನೋಡಿಕೊಳ್ಳಿ, ಎಲ್ಲಾ ರಾಜ್ಯಗಳಿಗೆ ಸಮಾನ ನ್ಯಾಯವನ್ನು ದೊರಕಿಸಿಕೊಡಿ’ ಎಂದು ಅವರು ಹೇಳಿದರು. 

Leave a Reply

Your email address will not be published. Required fields are marked *

error: Content is protected !!