ಗುವಾಹತಿಯಲ್ಲಿ ಜೂ.28ರಿಂದ 14 ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಅಸ್ಸಾಂ ಸರ್ಕಾರ
ಗುವಾಹತಿ: ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಗುವಾಹತಿಯಲ್ಲಿ ಜೂನ್ 28 ರಿಂದ ಎರಡು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಗುವಾಹತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವುತ್ತಿರುವುದಾಗಿ ಅಸ್ಸಾಂ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಗುವಾಹತಿಯಲ್ಲಿ ಜೂನ್ 28ರಿಂದ ಜುಲೈ 12ರ ವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುವುದು ಮತ್ತು ಇದೇ ಅವಧಿಯಲ್ಲಿ ರಾಜ್ಯದ ಇತರೆ ಭಾಗದಲ್ಲಿ ವಾರಾಂತ್ಯ ಲಾಕ್ ಡೌನ್ ಜಾರಿಗೊಳಿಸುತ್ತಿರುವುದಾಗಿ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
ಅಸ್ಸಾಂನ ಎಲ್ಲಾ ನಗರ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಈ ಅವಧಿಯಲ್ಲಿ ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ಇತರೆ ಅಗತ್ಯ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.