6 ವಾರಗಳ ಬಳಿಕ ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖ
ನವದೆಹಲಿ: ದೇಶದಾದ್ಯಂತ ಭಾನುವಾರ ಕೋವಿಡ್–19 ದೃಢಪಟ್ಟ 1,65,553 ಹೊಸ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 13ರ ನಂತರ 24 ಗಂಟೆಗಳ ಅಂತರದಲ್ಲಿ ದಾಖಲಾಗಿರುವ ಅತಿ ಕಡಿಮೆ ಪ್ರಕರಣಗಳು ಇದಾಗಿವೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಪ್ರಸ್ತುತ 21,14,508 ಪ್ರಕರಣಗಳು ಸಕ್ರಿಯವಾಗಿವೆ. ಭಾನುವಾರ ಬೆಳಗ್ಗಿನ ವರೆಗೂ 24 ಗಂಟೆಗಳಲ್ಲಿ ಕೊರೊನಾ ವೈರಸ್ ಸಂಬಂಧಿತ ಕಾರಣಗಳಿಂದಾಗಿ 3,460 ಮಂದಿ ಮೃತಪಟ್ಟಿದ್ದಾರೆ. ಸತತ ನಾಲ್ಕನೇ ದಿನ ಸಾವಿನ ಸಂಖ್ಯೆ 4 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.
ಒಟ್ಟು ಪ್ರಕರಣಗಳ ಸಂಖ್ಯೆ 2,78,94,800ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2,54,54,320 ಮಂದಿ ಗುಣಮುಖರಾಗಿದ್ದಾರೆ ಹಾಗೂ 3,25,972 ಮಂದಿ ಮೃತಪಟ್ಟಿದ್ದಾರೆ.
ಈವರೆಗೂ 21,20,66,614 ಡೋಸ್ಗಳಷ್ಟು ಲಸಿಕೆ ಹಾಕಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ. ದೇಶದಲ್ಲಿ ಮೇ 29ರ ವರೆಗೂ ಒಟ್ಟು 34,31,83,748 ಗಂಟಲು ದ್ರವ ಮಾದರಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿರುವುದಾಗಿ ಐಸಿಎಂಆರ್ ಪ್ರಕಟಿಸಿದೆ.
ಸೋಂಕು ನಿಯಂತ್ರಣಕ್ಕಾಗಿ ಕೇರಳ, ದೆಹಲಿ, ಪುದುಚೇರಿ, ಮೇಘಾಲಯ ಹಾಗೂ ಮಿಜೋರಾಂ ಸರ್ಕಾರ ಕೋವಿಡ್–19 ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ನಿರ್ಬಂಧಗಳು ಮುಂದುವರಿದಿವೆ.