ಕೊರೋನಾದಿಂದ ಅನಾಥವಾದ ಮಕ್ಕಳಿಗೆ ಸರ್ಕಾರದ ನೆರವು: 3,500 ರೂ. ಮಾಸಾಶನ ಘೋಷಣೆ

ಬೆಂಗಳೂರು: ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ”ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯನ್ನು ಜಾರಿಗೆ ತರಲಿದೆ; ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಕೊರೋನಾದಿಂದ ಅನಾಥರಾಗಿ, ವಿಸ್ತೃತ ಕುಟುಂಬದ ಆಶ್ರಯದಲ್ಲಿರುವ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ, ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುವುದು. 

“ವಿಸ್ತೃತ ಕುಟುಂಬದ ಆಸರೆಯಿಲ್ಲದ, 10 ವರ್ಷದೊಳಗಿನ ಕೋವಿಡ್ ನಿಂದಾಗಿ ಅನಾಥರಾಗಿರುವ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು. 

“21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು 1 ಲಕ್ಷ ರೂ. ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ/ಹಿತೈಷಿಗಳನ್ನು ನೇಮಿಸಲಾಗುವುದು. ಯೋಜನೆಯ ಸಮಗ್ರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.” ಎಂದಿದ್ದಾರೆ

Leave a Reply

Your email address will not be published. Required fields are marked *

error: Content is protected !!