ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಂಚನೆ; ಆರೋಪಿ ಪತ್ತೆಗೆ ಸಾರ್ವಜನಿಕರ ನೆರವು ಕೋರಿದ ಪೊಲೀಸರು
ಬೆಂಗಳೂರು: ತನ್ನ ಮೂಲ ಗುರುತನ್ನು ಮರೆಮಾಚಿ ನಕಲಿ ದಾಖಲೆಗಳೊಂದಿಗೆ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಅಮಾಯಕ ಜನರನ್ನು ವಂಚಿಸುತ್ತಿರುವ ವಂಚನೋರ್ವನನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು, ಇದಕ್ಕಾಗಿ ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ.
ಪೊಲೀಸ್ ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಮಹಾನಿರ್ದೇಶಕ ಶ್ರೀ ಪಿ ಎಸ್ ಸಂಧು ಅವರ ಮಾಹಿತಿಯಂತೆ, ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಛಾಯಾಚಿತ್ರಗಳನ್ನು ಹೊರತುಪಡಿಸಿ ಆರೋಪಿಯ ನಿಜವಾದ ಗುರುತು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಶಾಖೆಗಳಲ್ಲಿ ಮತ್ತು ಉತ್ತರ ಪ್ರದೇಶದ ಗೋರಖ್‌ಪುರದ ಕೆನರಾ ಬ್ಯಾಂಕಿನ ಒಂದು ಶಾಖೆಯಲ್ಲಿ ಆರೋಪಿಯು ಖಾತೆಗಳನ್ನು ತೆರೆದಿದ್ದಾನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಡ್ರಿ ಬಜಾರ್ ಶಾಖೆಯಲ್ಲಿ ವಿಜಯ್ ಸನ್ ಆಫ್ ರಾಮಚಂದ್ರ ಎಂಬ ಹೆಸರಿನಲ್ಲಿ ಆತ ಖಾತೆ ತೆರೆದಿದ್ದಾನೆ. ಮನೆ ಸಂಖ್ಯೆ 378 ಮತ್ತು 2/255, ಮನಸ್ ವಿಹಾರ್ ಕಾಲೋನಿ, ಗೋರಖ್ಪುರ್ ಸದರ್, ಗೋರಖ್ಪುರ್ ಎಂಬ ವಸತಿ ವಿಳಾಸವನ್ನು ನೀಡುವ ಮೂಲಕ ಖಾತೆಯನ್ನು ತೆರೆದಿದ್ದಾನೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊಹದ್ದಿಪುರ ಶಾಖೆಯಲ್ಲಿ ವಂಚಕ ಉಗ್ರಾಸೆನ್ ಸಿಂಗ್ ಅವರ ಪುತ್ರ ಸುಮಿತ್ ಸಿಂಗ್ ಎಂಬ ಹೆಸರಿನಲ್ಲಿ ಹೌಸ್ ನಂ 229, ಆವಾಸ್ ವಿಕಾಸ್ ಕಾಲೋನಿ, ಗೋರಖ್ಪುರ್ ಸದರ್, ಗೋರಖ್ಪುರ್ ಎಂಬುದನ್ನು ತಮ್ಮ ವಸತಿ ವಿಳಾಸವಾಗಿ ಒದಗಿಸಿ ಮತ್ತೂ ಒಂದು ಖಾತೆಯನ್ನು ತೆರೆದಿದ್ದಾನೆ.
ತಾರಮಂಡಲ್ ಶಾಖೆಯಲ್ಲಿ ತೆರೆಯಲಾದ ತನ್ನ ಖಾತೆಯಲ್ಲಿ, ಮೋಸಗಾರ ತನ್ನ ಹೆಸರನ್ನು ಸಂದೀಪ್ ಜೈಸ್ವಾಲ್ ಪುತ್ರ ಅಶೋಕ್ ಎಂದು ನೀಡಿದ್ದಾನೆ. ಮತ್ತು ತನ್ನ ವಿಳಾಸವನ್ನು ಹೌಸ್ ನಂ 1/87, ಆಜಾದ್ ನಗರ, ರುಸ್ತಾಂಪುರ, ಗೋರಖ್‌ಪುರ ಸದರ್, ಗೋರಖ್‌ಪುರ ಎಂದು ತೋರಿಸಿದ್ದಾನೆ.
2008 ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಸಿ) ಮತ್ತು 66 (ಡಿ) ಅಡಿಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ರ ಅಡಿಯಲ್ಲಿ ವಂಚನೆಯನ್ನು ಬೆಂಗಳೂರಿನ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.