ಉಡುಪಿ ವರ್ತಕರ ಹಿತರಕ್ಷಣಾ ವೇದಿಕೆ: ವಿಶ್ವಾಸದ ಮನೆಗೆ ರೂ.25 ಸಾವಿರ ಮೌಲ್ಯದ ಆಹಾರ ಸಾಮಾಗ್ರಿ ನೆರವು
ಶಿರ್ವ: (ಉಡುಪಿ ಟೈಮ್ಸ್ ವರದಿ) ಸುಮಾರು 300 ಮಂದಿ ಬೀದಿಗೆ ಬಿದ್ದ ಅನಾಥರಿಗೆ ಆಶ್ರಯ ನೀಡಿ ರಕ್ಷಿಸುತ್ತಿರುವ ಶಂಕರಪುರದ ವಿಶ್ವಾಸದ ಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯು ಸುಮಾರು ರೂ. 25 ಸಾವಿರ ಮೌಲ್ಯದ ಆಹಾರ ಪಡಿತರ, ತೆಂಗಿನಕಾಯಿ, ತರಕಾರಿಗಳನ್ನು ವಿತರಣೆ ಮಾಡಲಾಯಿತು.
ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಾಲ್ಟರ್ ಸಲ್ದಾನ ದಿನಸಿಗಳನ್ನು ವಿಶ್ವಾಸದಮನೆಗೆ ಹಸ್ತಾಂತರಿಸಿ ಮಾತನಾಡಿ, ಕೋವಿಡ್- 19 ಲಾಕ್ಡೌನ್ ಹಿನ್ನಲೆಯಲ್ಲಿ ಶಂಕರಪುರ ವಿಶ್ವಾಸದಮನೆಗೆ ದಾನಿಗಳ ಕೊರತೆ ಎದುರಾಗಿದ್ದು, ಸಂಸ್ಥೆಯ ಮನವಿ ಮೇರೆಗೆ ಉಡುಪಿ ಜಿಲ್ಲೆಯ ವರ್ತಕರ ಸಹಕಾರದೊಂದಿಗೆ ಆಹಾರ ದಿನಸಿ ಪದಾರ್ಥ ವಿತರಣೆ ಮಾಡಲಾಗಿದೆ ಎಂದರು. ವಿಶ್ವಾಸದಮನೆ ಸಂಸ್ಥೆಯ ಮುಖ್ಯಸ್ಥ ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ಮಾತನಾಡಿ, ಕೋವಿಡ್ ಸಂಕಷ್ಟ ಕಾಲದಲ್ಲಿ ಸಕಾಲಿಕವಾಗಿ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯು ದಿನಸಿ ಪದಾರ್ಥಗಳನ್ನು ಒದಗಿಸಿಕೊಟ್ಟಿದ್ದಾರೆ.
ನಮ್ಮಲ್ಲಿರುವ ನಿರ್ಗತಿಕರ ಆರೈಕೆಗಾಗಿ ಸಹೃದಯಿ ದಾನಿಗಳು ಆಹಾರ ಸಾಮಾಗ್ರಿಗಳನ್ನು ನೀಡಿ ಸಹಕರಿಸಬೇಕು ಎಂದರು.ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ದಿವಾಕರ್ ಸನಿಲ್, ಡಾಲ್ಫಿವಿಕ್ಟರ್ ಲೂಯಿಸ್, ಮ್ಯಾಕ್ಸಿಮ್ ಸಲ್ದಾನ, ಆನಂದ ಕಾರ್ನಾಡ್, ಡೊನಾಲ್ಡ್ ಸಲ್ದಾನ ಉಪಸ್ಥಿತರಿದ್ದರು.