ಈ ಪುಟ್ಟ ಗ್ರಾಮದಲ್ಲಿ ಈಗ ಕೋವಿಡ್ ಪ್ರಕರಣಗಳು ‘ಶೂನ್ಯ’: ಇದು ಹೇಗೆ ಸಾಧ್ಯವಾಯ್ತು ಗೊತ್ತ…?

ಕಾರವಾರ ಮೇ.28(ಉಡುಪಿ ಟೈಮ್ಸ್ ವರದಿ): ಸಾಮಾನ್ಯವಾಗಿ ಕೋವಿಡ್ ಪ್ರಕರಣಗಳು ಹೆಚ್ಚಾದಂತೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಅನೇಕರು ಜಿಲ್ಲಾಡಳಿವನ್ನೋ, ಅಥವಾ ಸರಕಾರವನ್ನೋ ದೂಶಿಸೋದನ್ನು ನೋಡುತ್ತೇವೆ. ಆದರೆ ವಾಸ್ತವವಾಗಿ ಸರಕಾರ ರೂಪಿಸಿದ ನಿಯಮ ಪಾಲಿಸುವಲ್ಲಿ ನಾವು ನಿರ್ಲಕ್ಷ್ಯ ತೋರುತ್ತಿದ್ದೇವೆ ಎನ್ನುವುದನ್ನು ಮರೆತು ಬಿಡುತ್ತೇವೆ ಅಥವಾ ಮರೆ ಮಾಚುತ್ತೇವೆ. ಕೋವಿಡ್ ನಿಯಂತ್ರಣಕ್ಕೆ ಸರಕಾರ ನಿಯಮ ಕೈಗೊಂಡರೆ ಸಾಲದು ಆ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವ ಪ್ರವೃತ್ತಿಯನ್ನು ನಾವು ಬೆಳೆಸಬೇಕು.

ನಾವು ಪ್ರತಿಯೊಬ್ಬರೂ ಸ್ವಯಂ ಆಗಿ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವ ಮೂಲಕ ಕೋವಿಡ್ ನಿರ್ಮೂಲನೆಯ ಪಣ ತೊಟ್ಟಾಗ ಎಂತಹ ಮಹಾಮಾರಿ ಕೊರೋನಾವನ್ನೂ ಕೂಡಾ ನಿರ್ಮೂಲನೆ ಮಾಡಬಹುದು ಎಂದು ಈ ಗ್ರಾಮದ ಜನರು ತೋರಿಸಿಕೊಟ್ಟಿದ್ದಾರೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಾವಿನ ಮನೆ ಗ್ರಾಮ ಪಂಚಾಯತ್ ಇಂದು ಕೋವಿಡ್ ಸೋಂಕು ಮುಕ್ತ ಗ್ರಾಮವನ್ನಾಗಿ ರೂಪಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸರಕಾರ ರೂಪಿಸಿದ ಲಾಕ್ ಡೌನ್ ನಿಯಮವನ್ನು ಸರಿಯಾಗಿ ಪಾಲಿಸಿದರೆ ಕೊರೋನಾ ನಿಯಂತ್ರಣಕ್ಕೆ ತರುವ ಜೊತೆಗೆ ನಿರ್ಮೂಲನೆ ಮಾಡಬಹುದು  ಎಂಬುದನ್ನು ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ.

ಆರಂಭದಲ್ಲಿ ಈ ಗ್ರಾಮದಲ್ಲಿ 100 ಕೊರೋನಾ ಪ್ರಕರಣಗಳಿದ್ದವು. ಆದರೀಗ ಈ ಗ್ರಾಮದಲ್ಲಿ ಒಂದೇ ಒಂದು ಕೊರೋನಾ ಕೇಸುಗಳಿಲ್ಲ. ಕೋವಿಡ್ ನಿರ್ಮೂಲನೆ ಯಲ್ಲಿ ಯಶಸ್ವಿಯಾದ ಗ್ರಾಮ ಪಂಚಾಯತ್ ನ ಕಾರ್ಯವನ್ನು  ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್  ಅವರು ಶ್ಲಾಘಿಸಿದ್ದಾರೆ. ಅಲ್ಲದೆ, ಖುದ್ದಾಗಿ ಪಂಚಾಯತ್ ಗೆ ಭೇಟಿ ನೀಡಿ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಮಾವಿನ ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಳು ಗ್ರಾಮಗಳು ಬರುತ್ತವೆ. ಕೊರೋನಾ ಸೋಂಕು ನಿರ್ಮೂಲನೆಗೆ ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಗಳ ಸಹಾಯಕ್ಕೆ ಕಾಯದೆ ಗ್ರಾಮಸ್ಥರೇ ಸೋಂಕು ನಿರ್ಮೂಲನೆಗೆ ಪಣತೊಟ್ಟು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವ ಶಿವರಾಮ್ ಹೆಬ್ಬಾರ್ ಅವರು, ನಾನು ಉತ್ತರ ಕನ್ನಡದಿಂದ ಬೆಂಗಳೂರಿಗೆ ಹೋಗುವಾಗ ಒಂದೇ ಒಂದು ಚೆಕ್ ಪೋಸ್ಟ್ ಆಗಲಿ, ಟೂಲ್ ಬೂತ್ ಆಗಲಿ ನನ್ನನ್ನು ನಿಲ್ಲಿಸಿ ತಪಾಸಣೆ ಮಾಡುವುದಿಲ್ಲ, ಆದರೆ ಈ ಗ್ರಾಮ ಪಂಚಾಯತ್ ನಲ್ಲಿ ನನ್ನನ್ನು ಆರು ಕಡೆಗಳಲ್ಲಿ ನಿಲ್ಲಿಸಿ ತಪಾಸಣೆ ಮಾಡಿದ್ದಾರೆ, ಅಂದರೆ ಇಲ್ಲಿ ಲಾಕ್ ಡೌನ್ ನಿಯಮ ವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಗ್ರಾಮಸ್ಥರು ಸರಿಯಾಗಿ ಕೋವಿಡ್ ನಿಯಮ ಪಾಲಿಸಿದರೆ ತಮ್ಮನ್ನು ತಾವು ಸುರಕ್ಷಿತವಾಗಿ ನೋಡಿಕೊಂಡರೆ ಸರ್ಕಾರದ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ ಮತ್ತು ಗ್ರಾಮವನ್ನು ಕೊರೋನಾ ಮುಕ್ತ ಮಾಡ ಬಹುದು ಎಂದು ಸಚಿವರು ಹೇಳುತ್ತಾರೆ.

ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 500 ಮನೆಗಳಿವೆ. ಇಲ್ಲಿ ಒಂದು ಸಮಯದಲ್ಲಿ 108 ಕೊರೋನಾ ಸೋಂಕು ಇದ್ದವು. ಕೊರೋನಾ ಎರಡನೇ ಅಲೆ ಎದ್ದಾಗ 15 ನಿವಾಸಿಗಳು ಕೊರೋನಾ ಪಾಸಿಟಿವ್ ಗೆ ಒಳಗಾಗಿದ್ದರು. ಮಳವಳ್ಳಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 15 ಅತಿಥಿಗಳಿಗೆ ಕಳೆದ ಏಪ್ರಿಲ್ 19ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಕೆಲವೇ ದಿನಗಳಲ್ಲಿ ಅದು ಹೆಚ್ಚಾಗಿ 108 ಪ್ರಕರಣಗಳಿಗೆ ಏರಿಕೆಯಾಯಿತು ಎನ್ನುತ್ತಾರೆ ಕಾರ್ಯಪಡೆಯ ಸದಸ್ಯ ಗೋಪಾಲ್ ಕೃಷ್ಣ ಹೆಗ್ಡೆ.
ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ಅರಿವಾಗಿ ಗ್ರಾಮ ಪಂಚಾಯತ್ ಕಾರ್ಯಪ್ರವೃತ್ತವಾಗಿ ಕಾರ್ಯಪಡೆಯನ್ನು ರಚಿಸಿ ಸೋಂಕು ಹರಡದಂತೆ ನೋಡಿಕೊಂಡಿತು.

ಕಾರ್ಯಪಡೆ ಗ್ರಾಮದಲ್ಲಿ ಹಲವಾರು ಚೆಕ್ ಪೋಸ್ಟ್‌ಗಳನ್ನು ನಿಗದಿಪಡಿಸಿದೆ. ಇದರಿಂದ ಜನರು ತಮ್ಮ ವಾಹನಗಳನ್ನು ಹೊರತೆಗೆಯಲು ಸಾಧ್ಯವಾಗುವುದಿಲ್ಲ ಮತ್ತು ತುರ್ತು ಪರಿಸ್ಥಿತಿ ಹೊರತು ಹೊರಗಿನವರು ತಮ್ಮ ಗ್ರಾಮಕ್ಕೆ ಪ್ರವೇಶಿಸುವುದಿಲ್ಲ. ಮಾವಿನ ಮನೆ ಸಹಕಾರ ಸಮುದ್ರ ಸಂಘ, ಸಹಕಾರಿ ಸಮಾಜ ಮತ್ತು ಕೆಲವು ದಾನಿಗಳು ಒಗ್ಗೂಡಿ ದಿನಸಿ ಮತ್ತು ಇತರ ಅಗತ್ಯ ವಸ್ತುಗಳನ್ನು ಹಳ್ಳಿಗಳಲ್ಲಿನ ಪ್ರತಿಯೊಂದು ಮನೆಗೂ ಸರಬರಾಜು ಮಾಡುವುದರಿಂದ ಯಾರೂ ಹೊರಹೋಗುವ ಅಗತ್ಯವಿಲ್ಲ. ರೋಗಿಗಳ ವೈದ್ಯಕೀಯ ನೆರವು, ಪರೀಕ್ಷೆ ಮತ್ತು ನಿಯಮಿತ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಪಿಡಿಒಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಇತರರನ್ನು ನಿಯೋಜಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು, ಆರೋಗ್ಯ ಇಲಾಖೆ ಸಿಬ್ಬಂದಿ ನಿಯಮಿತವಾಗಿ ಪ್ರತಿದಿನ ಮನೆಗಳಿಗೆ ಭೇಟಿ ನೀಡಿ ಜನರ ಆಕ್ಸಿಜನ್ ಮಟ್ಟ, ತಾಪಮಾನ ಪರೀಕ್ಷೆ ಮಾಡುತ್ತಾರೆ, ಕೋವಿಡ್ ಸಂಬಂಧಿ ಗುಣಲಕ್ಷಣ ಯಾರಲ್ಲಾದರೂ ಕಂಡುಬಂದರೆ ಅವರನ್ನು ಪ್ರತ್ಯೇತವಾಗಿರಿಸುತ್ತಾರೆ. ಈಗಾಗಲೇ ಗ್ರಾಮದ ನೂರಕ್ಕೂ ಹೆಚ್ಚು ರೋಗಿಗಳು ಗುಣಮುಖವಾಗಿದ್ದು ಕೊನೆಯ 8ಮಂದಿ ಗುಣಮುಖ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮೂಲಕ ಗ್ರಾಮ ಕೊರೋನಾ ಮುಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!