ವಶಪಡಿಸಿಕೊಂಡ ಮರಳನ್ನೇ ಕದ್ದ ಮರಳು ಮಾಫಿಯಾ ಕುಳಗಳು!
ಹಿರಿಯಡ್ಕ : ಉಡುಪಿ ಜಿಲ್ಲೆಯ ಶಿರೂರು ಗ್ರಾಮದ ಸ್ವರ್ಣ ನದಿಯ ಬಜೆ ಡ್ಯಾಂ ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡು ದಾಸ್ತಾನು ಇರಿಸಿದ್ದ 70 ಮೆಟ್ರಿಕ್ ಟನ್ ಮರಳಿನಲ್ಲಿ, ಮತ್ತೆ 20 ಟನ್ ಮರಳನ್ನು ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡಿರುವ ವಿಚಾರದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ನೇತೃತ್ವದಲ್ಲಿ ಮರಳು ದಾಸ್ತಾನು ಮಾಡಿದ ಜಾಗ ಪರಿಶೀಲನೆ ನಡೆಸಿದಾಗ ಮರಳು ಕಳವು ಆಗಿರುವುದು ತಿಳಿದು ಬಂದಿದೆ. ಆ ಹಿನ್ನಲೆಯಲ್ಲಿ ಗೌತಮ್ ಶಾಸ್ತ್ರಿ ಹಿರಿಯಡ್ಕ ಠಾಣೆಗೆ ಹೋಗಿ,ಅಲ್ಲಿಂದ ಪೊಲೀಸರ ಜೊತೆ ದಾಸ್ತಾನು ಜಾಗಕ್ಕೆ ಪರಿಶೀಲನೆ ನಡೆಸಲು ಹೋಗುವಾಗ ಮರಳನ್ನು ಅಕ್ರಮವಾಗಿ ಟೆಂಪೋಕ್ಕೆ ತುಂಬಿಸುತ್ತಿರುವುದು ತಿಳಿದು ಬಂತು.ಆಗ ಪೊಲೀಸರು ಕೂಡಲೇ ಟೆಂಪೋವನ್ನು ವಶಪಡಿಸಿಕೊಂಡರು.
ಹಿರಿಯ ಭೂ ವಿಜ್ಞಾನಿ,ತಹಶಿಲ್ದಾರರು,ಕಂದಾಯ ನೀರಿಕ್ಷಕರು, ಪಿಡಿಒ, ಗ್ರಾಮಕರಿಣಿಕರೊಂದಿಗೆ ಸ್ಥಳ ಪರಿಶೀಲನೆ ಮಾಡುವಾಗ ಇಲ್ಲಿನ ಸುಮಾರು ಎಂಟು ಸಾವಿರ ಮೌಲ್ಯದ 20 ಮೆಟ್ರಿಕ್ ಟನ್ ಸ್ವಾಧೀನ ಪಡಿಸಿದ ಹೂಳನ್ನು ದಯಾನಂದ ಮಲ್ಯ ಹಾಗೂ ಆಶೋಕ್ ಜೋಗಿ ಹಾಗೂ ಇತರರು ಸೇರಿ ಕಳ್ಳತನ ಮಾಡಿ ಮರಳು ಸಾಗಾಟ ಮಾಡಿದ್ದು ತಿಳಿದು ಬಂದಿದೆ. ಈಗ ಇವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.