ಮೈಸೂರು ಮೇಯರ್ ಸದಸ್ಯತ್ವ ರದ್ದು: ಹೈಕೋರ್ಟ್ ಆದೇಶ
ಮೈಸೂರು ಮೇ.27: ಕೋವಿಡ್ ಬಿಕ್ಕಟ್ಟಿನ ನಡುವೆ ರಾಜ್ಯದಲ್ಲಿ ಮೈಸೂರು ಮಹಾ ನಗರ ಪಾಲಿಕೆಯ ಮೇಯರ್ ಚುನಾವಣೆ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.
ಮೂರು ತಿಂಗಳ ಹಿಂದೆಯಷ್ಟೇ ಜೆಡಿಎಸ್ ಮತ್ತು ಕಾಂಗ್ರೆಸ್ ನ ಮೈತ್ರಿಯಿಂದ ಮೈಸೂರು ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಅವರು ಮಹಾನಗರ ಪಾಲಿಕೆಯ ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರ ಪಾಲಿಕೆ ಸದಸ್ಯತ್ವವನ್ನು ರದ್ದು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ರುಕ್ಮಿಣಿ ಅವರ ಮೇಯರ್ ಸ್ಥಾನ ಕಳೆದುಕೊಳ್ಳುವ ಹಂತದಲ್ಲಿದೆ.ಈ ನಡುವೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದಾದರೂ ಕೂಡಾ, ಸುಪ್ರೀಂ ಕೋರ್ಟ್ ನಿಂದ ಹೈ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗುವವರೆಗೂ ಮೇಯರ್ ಸ್ಥಾನ ಉಳಿಯುವ ಸಾಧ್ಯತೆ ಕಡಮೆ ಇದೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ವಿಚಾರ ಈಗ ಗರಿಗೆದರಿದೆ.
ಈ ನಡುವೆ ರಾಜ್ಯದಲ್ಲಿ ಮತ್ತೊಂದು ವಿಚಾರವಾಗಿ ಬಿರುಸಿನ ಚರ್ಚೆ ನಡೆಯುತ್ತಿದೆ. ಅದು ಸದ್ಯದ ಪರಿಸ್ಥಿತಿಯಲ್ಲಿ ರುಕ್ಮಿಣಿ ಮಾದೇಗೌಡ ಅವರು ಮೇಯರ್ ಸ್ಥಾನದಿಂದ ಕೆಳಗೆ ಇಳಿದರೆ ಮತ್ತೆ ಆ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಆಗ ಯಾರ ಜೊತೆ ಯಾರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸುತ್ತಿದೆ. ಯಾಕೆಂದರೆ ಕೋವಿಡ್ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ನಡುವಿನ ರಾಜಕೀಯ ಕೆಸರೆರೆಚಾಟ ಜೋರಾಗಿ ನಡೆಯುತ್ತಿರುವುದರಿಂದ ಕಾಂಗ್ರೆಸ್ ಈ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಸಾಧ್ಯತೆ ಬಹಳ ಕಡಮೆ. ಹೀಗಿರುವಾಗ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಅಥವಾ ಏಕಾಂಗಿಯಾಗಿ ಜೆಡಿಎಸ್ ಸ್ಪರ್ಧಿಸುತ್ತಾ ಎನ್ನುವ ಚರ್ಚೆಗಳೂ ಸಾಮಾಜಿಕ ವಲಯದಲ್ಲಿ ನಡೆಯುತ್ತಿದೆ.