ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ವಲಯದ ಸುಲಿಗೆಗೆ ಅವಕಾಶಬೇಡ: ಡಿಕೆಶಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಪಡಿಸಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೋವಿಡ್ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್, ಆಯುಷ್ಮಾನ್ ಕರ್ನಾಟಕ ಆರೋಗ್ಯ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಆಯುಷ್ಮಾನ್ ಭಾರತ್, ರಾಜ್ಯ ಸರ್ಕಾರದ ಆಯುಷ್ಮಾನ್ ಕರ್ನಾಟಕ ಎರಡೂ ಯೋಜನೆಗಳು ಅಸ್ಥಿತ್ವದಲ್ಲಿವೆ. ಹೀಗಿರುವಾಗ ಖಾಸಗಿ ಆಸ್ಪತ್ರೆಗಳಲ್ಲಿ ಚಕಿತ್ಸೆಗೆ ದರ ನಿಗದಿಪಡಿಸುವ ಔಚಿತ್ಯವಾದರೂ ಏನು?. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದರು.
ತಾವು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿತ್ತು. ಬಿಪಿಎಲ್ ಬಡ ಕುಟುಂಬಗಳಿಗೆ 5ಲಕ್ಷ ರೂ, ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 1.5 ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿತ್ತು. ಹೀಗಿರುವಾಗ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಚಿಕಿತ್ಸೆ ನಿಗದಿಸಿರುವ ಸರ್ಕಾರದ ಕ್ರಮ ಖಂಡನೀಯ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಹರಿದುಬಂದಿದೆ. ಸರ್ಕಾರವೇ ತನ್ನ ನಿರ್ಲಕ್ಷ್ಯದಿಂದ ಕೊರೊನಾ ಸೋಂಕನ್ನು ಎಲ್ಲರಿಗೂ ಹಂಚಿದೆ. ಈ ನಿಧಿಯನ್ನು ಬಳಸಿಕೊಂಡು ಜನರಿಗೆ ಉಚಿತ ಚಿಕಿತ್ಸೆ ನೀಡಬೇಕು. ಬಡವರಿಂದ ಹಣ ವಸೂಲಿ ಮಾಡಲು ಯಾವುದೇ ಕಾರಣಕ್ಕೂ ಮಾಡಬಾರದೆಂದು ಸರ್ಕಾರವನ್ನು ಆಗ್ರಹಿಸಿದರು.
ಕೋವಿಡ್ ಚಿಕಿತ್ಸೆಯಲ್ಲಿ ತಾರತಮ್ಯ ನೀತಿಯನ್ನು ಖಂಡಿಸಿದ ಡಿ.ಕೆ.ಶಿವಕುಮಾರ್, ಆಶಾಕಾರ್ಯಕರ್ತೆಯರು, ವೈದ್ಯರು, ಐಎಎಸ್ ಅಧಿಕಾರಿಗಳೆಲ್ಲರೂ ಒಂದೇ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಕೊಡಬೇಕು. ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂದು ಸರ್ಕಾರಕ್ಕೆ ಬುದ್ಧಿ ಮಾತು ಹೇಳಿದರು.
ಕನಕಪುರದಲ್ಲಿ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಿರುವ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕನಕಪುರದ ನಾಗರೀಕನಾಗಿ ತಾವು ಉತ್ತಮ ಕೆಲಸ ಮಾಡಿದ್ದು, ಬೆಂಗಳೂರಿನಲ್ಲಿ ಲಾಕ್ಡೌನ್ ವಿಚಾರವಾಗಿ ಬೆಂಗಳೂರಿನ ನಾಗರೀಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮುನ್ನೆಚ್ಚರಿಕೆಯಿಂದ ಕ್ರಮಕೈಗೊಂಡಿದ್ದರೆ, ಲಾಕ್ಡೌನ್ ಮಾಡಿದ್ದರೆ ಹಾಸಿಗೆಗಳ ಕೊರತೆ ಎದುರಾಗುತ್ತಿರಲಿಲ್ಲ. ಕೊರೋನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರಕ್ಕೆ ಒಂದು ಆ್ಯಂಬ್ಯುಲೆನ್ಸ್ ಕಳಿಸಲು ಕೂಡ ಸಾಧ್ಯವಾಗುತ್ತಿಲ್ಲ. ಈ ಸರ್ಕಾರದಲ್ಲಿ ಜನ ಬದುಕಿದ್ದೂ ಸತ್ತಂತೆಯೇ ಆಗಿದೆ. ಇಡೀ ದೇಶದ ಜನರನ್ನ ಬದುಕಿದ್ದೂ ಕೊಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರನ್ನು ಸುಲಿಗೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ . ಕಳೆದ 18 ದಿನದಲ್ಲಿ ಪೆಟ್ರೋಲ್ ದರ 10 ರೂಪಾಯಿ 48ಪೈಸೆ ಏರಿಕೆ ಆಗಿದೆ .ಇದರೊಂದಿಗೆ ದಿನಬಳಕೆ ವಸ್ತುಗಳಎಲ್ಲಾ ದರಗಳೂ ಏರಿವೆ. ಇದು ದೇಶದ ಜನರಿಗೆ ಮಾಡಿದ ಬಹು ದೊಡ್ಡ ಮೋಸ. ಈ ಸಂಬಂಧ ಚರ್ಚಿಸಲು ಜೂನ್.29 ರಂದು ಹಿರಿಯ ನಾಯಕರ ಸಭೆ ಕರೆಯಲಾಗಿದೆ. ಅದೇ ದಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೇಂದ್ರದ ವಿರುದ್ಧ ಹೋರಾಟ ಹಾಗೂ ಜುಲೈ 4 ಮತ್ತು 5 ರಂದು ತಾಲೂಕು ಮಟ್ಟದಲ್ಲಿ ಧರಣಿ ನಡೆಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಇನ್ನು ಹೊಸದಾಗಿ ಕೆಪಿಸಿಸಿಯಲ್ಲಿ ಹೊಸದಾಗಿ ಚಾಲಕರ ಘಟಕ(ಸೆಲ್) ಆರಂಭಿಸುತ್ತಿದ್ದು, ತಾಲೂಕು ಬ್ಲಾಕ್ ಮಟ್ಟದಲ್ಲಿಯೂ ಸಂಘ ಸಂಘಟಿಸಲಾಗುವುದು. ಬಡವರ ಜಮೀನು ಮಾರಾಟಕ್ಕೂ ಜಿಎಸ್ ಟಿ ತಂದಿರುವ ಸರ್ಕಾರಗಳ ಕ್ರಮ, ನಿರುದ್ಯೋಗ ಹೆಚ್ಚಳದ ವಿರುದ್ಧವೂ ಹೋರಾಟ ರೂಪಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಇತ್ತೀಚೆಗೆ ನಡೆದ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಹುತಾತ್ಮರಾಗಿರುವ ಭಾರತದ ಯೋಧರಿಗೆ ಕಾಂಗ್ರೆಸ್ ಮೌನಾಚರಣೆ ಮೂಲಕ ರಾಜ್ಯಾದ್ಯಂತ ಗೌರವ ಮತ್ತು ಶ್ರದ್ಧಾಂಜಲಿ ಸಮರ್ಪಿಸಲು ನಿರ್ಧರಿಸಿದೆ. ರಾಷ್ಟ್ರಾದ್ಯಂತ ಮೌನಾಚರಣೆ ಮಾಡಲು ರಾಷ್ಟ್ರೀಯ ಕಾರ್ಯಕಾರಿಣಿ ಕೈಗೊಂಡ ನಿರ್ಣಯದ ಅನುಸಾರ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೌನಾಚರಣೆಗೆ ಕರೆ ನೀಡಿರುವುದಾಗಿ ಹೇಳಿದರು.
ಗಾಂಧಿ ಪ್ರತಿಮೆ ಬಳಿ ಕೆಪಿಸಿಸಿಯಿಂದ ಮೌನಾಚರಣೆ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಮಾಜಿಸ ಸಚಿವ ಕೃಷ್ಣಭೈರೇಗೌಡ ಉಪಸ್ಥಿತರಿದ್ದರು