ಸೆಪ್ಟಂಬರ್ 3ನೇ ವಾರದಲ್ಲಿ ಐಪಿಎಲ್ ಉಳಿದ ಪಂದ್ಯಗಳು?
ಮುಂಬೈ: ಕೊರೋನಾ ಸಾಂಕ್ರಾಮಿಕ ಎರಡನೇ ಅಲೆಯಿಂದಾಗಿ ಐಪಿಎಲ್ 14ನೇ ಆವೃತ್ತಿಯನ್ನು ರದ್ದುಗೊಳಿಸಿದ್ದ ಬಿಸಿಸಿಐ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 10 ರವರೆಗೆ ಈ ಆವೃತ್ತಿಯ ಉಳಿದ ಪಂದ್ಯಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ. ಅಕ್ಟೋಬರ್ 10 ರಂದು ಐಪಿಎಲ್ನ 14ನೇ ಆವೃತ್ತಿಯ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದರಲ್ಲಿ 10 ಡಬಲ್ ಹೆಡರ್ ಪಂದ್ಯಗಳು, ಮತ್ತೊಂದು ಏಳು ಸಿಂಗಲ್ಸ್ ಪಂದ್ಯಗಳು ಹಾಗೂ 4 ಮುಖ್ಯ ಪಂದ್ಯಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.
ಈ ಬಗ್ಗೆ ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಬೇಕಿದೆ. ಲೀಗ್ನ ಅಂತಿಮ ತೀರ್ಮಾನವನ್ನು ಮೇ 29 ರಂದು ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ(ಎಸ್ಜಿಎಂ) ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಜೂನ್ 2 ರಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಟೀಮ್ ಇಂಡಿಯಾ, ಅಲ್ಲಿ ಮೊದಲು ನ್ಯೂಜಿಲೆಂಡ್ ತಂಡದ ವಿರುದ್ದ ಜೂನ್ 18 ರಿಂದ 22 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡಲಿದೆ. ನಂತರ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದ್ದು, ಟೀಮ್ ಇಂಡಿಯಾ ಸೆಪ್ಟೆಂಬರ್ 15 ರಂದು ದುಬೈಗೆ ತೆರಳಲಿದೆ. ದುಬೈನಲ್ಲಿ ಐಪಿಎಲ್ ನಡೆಸಿದರೆ ವಿದೇಶಿ ಆಟಗಾರರನ್ನು ಕಳುಹಿಸಲು ಹಾದಿ ಸುಗಮವಾಗುತ್ತದೆ. ಐಪಿಎಲ್ನ 14 ನೇ ಆವೃತ್ತಿಯಲ್ಲಿ ಈವರೆಗೆ 29 ಪಂದ್ಯಗಳನ್ನು ಆಡಲಾಗಿದೆ. ಉಳಿದ 31 ಪಂದ್ಯಗಳು ಆಡಬೇಕಿದೆ.