ಸಿಡಿಲಿನ ಅಬ್ಬರಕ್ಕೆ 83 ಮಂದಿ ಬಲಿ: ಪರಿಹಾರ ಘೋಷಿಸಿದ ಬಿಹಾರ ಸರ್ಕಾರ: ಪ್ರಧಾನಿ ಮೋದಿ ಸಂತಾಪ
ಪಾಟ್ನಾ: ಸಿಡಿಲಿನ ಅಬ್ಬರಕ್ಕೆ ಬಿಹಾರದಲ್ಲಿ ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ 83 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಬಿಹಾರದ ಗೋಪಾಲ್ಗಂಜ್, ಸಿವಾನ್, ಮಧುಬನಿ, ಮೋತಿಹಾರಿ, ದರ್ಭಂಗದಲ್ಲಿ ಸಿಡಿಲಿಗೆ ಒಟ್ಟು 83 ಜನರು ಸಾವನ್ನಪ್ಪಿದ್ದಾರೆ. ಗೋಪಾಲ್ಗಂಜ್ನಲ್ಲಿ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಸಿವಾನ್ನಲ್ಲಿ ಐದು ಜನರು ಸಾವನ್ನಪ್ಪಿದರು. ಮಧುಬನಿ ಮತ್ತು ಮೋತಿಹರಿಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.
ದರ್ಬಂಗದಲ್ಲೂ ವ್ಯಕ್ತಿಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ನಿತೀಶ್ ಕುಮಾರ್ 4 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡುವ ಮಾಹಿತಿ ಪ್ರಕಾರ ಬಿಹಾರದ 23 ಜಿಲ್ಲೆಗಳಲ್ಲಿ ಸಿಡಿಲು ಅಪ್ಪಳಿಸಿದೆ. ಈ ವೇಳೆ 83 ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ.
ಅನೇಕ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿಯ ಪ್ರಕಾರ, ಗೋಪಾಲ್ಗಂಜ್ನಲ್ಲಿ ಮೃತಪಟ್ಟವರೆಲ್ಲರೂ ಬಾರೌಲಿ, ಮಂಜಾ, ವಿಜಯಪುರ, ಉಚ್ಕಾಗಾಂವ್, ಕಟೇಯ ಪ್ರದೇಶದ ನಿವಾಸಿಗಳು.
ಸಿಡಿಲಿನ ಹೊಡೆತಕ್ಕೆ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ಚಿಕಿತ್ಸೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಘಟನೆ ವೇಳೆ ಮನೆ ಹಾಗೂ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಸಿಡಿಲಿಗೆ ಬಲಿಯಾದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ರಕ್ಷಣಾ ಕಾರ್ಯಗಳನ್ನು ಕೈಗೊಂಡಿದ್ದು, ಅಗತ್ಯ ಪರಿಹಾರ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.