ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್‌ಐ ವಿರುದ್ಧ ಎಫ್‌ಐಆರ್ ದಾಖಲಿಸಿ: ಸಿದ್ದರಾಮಯ್ಯ ಆಗ್ರಹ
ಬೆಂಗಳೂರು: ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕನಿಗೆ ಬೇರೊಬ್ಬ ಯುವಕನ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಅರ್ಜುನ್ ಹೊನಕೇರಿ ವಿರುದ್ಧ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವವನನ್ನು ಈಗ ಸಸ್ಪೆಂಡ್ ಮಾಡಿದ್ದಾರೆ. ಪಿಎಸ್ ಐ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ಕೂಡಲೇ ಅವನನ್ನು ಬಂಧಿಸಬೇಕು. ಬಲತ್ಕಾರವಾಗಿ ಮೂತ್ರ ಕುಡಿಡುವುದು ಅಮಾನವೀಯ. ಅದು ಒಬ್ಬ ಪಿಎಸ್ ಐ ಇಂತಹ ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್‌ಐ ಅರ್ಜುನ್ ಹೊನಕೇರಿ ಅವರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಿ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಪಶ್ಚಿಮ ವಲಯ ಐಜಿಪಿ ಭಾನುವಾರ ಪಿಎಸ್‌ಐ ಅವರನ್ನು ಅಮಾನತು ಮಾಡಿದ್ದು, ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ಪಿಎಸ್‌ಐ ಅರ್ಜುನ್‌ನನ್ನು ಒಒಡಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.