ಯಾಸ್ ಚಂಡಮಾರುತ: ಪರಿಸ್ಥಿತಿ ಎದುರಿಸಲು 11 ವಾಯುಪಡೆ ವಿಮಾನಗಳು, 25 ಹೆಲಿಕಾಪ್ಟರ್ ಗಳ ಸಿದ್ಧತೆ!
ವದೆಹಲಿ: ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳ ಭಾಗವಾಗಿ ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಮಾನವೀಯ ನೆರವು ನೀಡಲು ಭಾರತೀಯ ವಾಯುಪಡೆಯು 11 ಸಾರಿಗೆ ವಿಮಾನಗಳು ಮತ್ತು 25 ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತವನ್ನು ನಿಭಾಯಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾನುವಾರ 21 ಟನ್ ಪರಿಹಾರ ಸಾಮಾಗ್ರಿಗಳು ಮತ್ತು ಮೂರು ವಿವಿಧ ಕಡೆಗಳಿಂದ 334 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು ಕೊಲ್ಕತ್ತಾ ಮತ್ತು ಪೋರ್ಟ್ ಬ್ಲೇರ್ ಗೆ ಭಾರತೀಯ ವಾಯುಪಡೆ ಏರ್ ಲಿಫ್ಟ್ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಐದು ಸಿ-130 ವಿಮಾನಗಳನ್ನು ಬಳಸಿ ಪಾಟ್ನಾ, ವಾರಾಣಸಿ ಮತ್ತು ಅರಕ್ಕೋಣಂನಿಂದ ಪರಿಹಾರ ಸಾಮಾಗ್ರಿಗಳು ಮತ್ತು ಸಿಬ್ಬಂದಿಯನ್ನು ಸಾಗಿಸಲಾಗಿದೆ.ಯಾಸ್ ಚಂಡಮಾರುತಕ್ಕಾಗಿ ಇದು ಸಿದ್ಧತೆಯಾಗಿದೆ. ಮೇ 21ರಿಂದಲೂ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೂ 606 ಸಿಬ್ಬಂದಿ ಮತ್ತು 57 ಟನ್ ಸಾಮಾಗ್ರಿಗಳನ್ನು ವಾಯುಪಡೆ ಏರ್ ಲಿಫ್ಟ್ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರು ಸಿ-130ಎಸ್, ಸೇರಿದಂತೆ 11 ಸಾರಿಗೆ ವಿಮಾನಗಳು, ನಾಲ್ಕು ಎಎನ್-32 ವಿಮಾನಗಳು ಮತ್ತು ಎರಡು ಡಾರ್ನಿಯರ್ ವಿಮಾನಗಳು ಮಾನವೀಯ ನೆರವು ಮತ್ತು ವಿಪತ್ತು ನೆರವು ಕಾರ್ಯಾಚರಣೆಗಾಗಿ ಸಿದ್ಧಗೊಂಡಿವೆ. ಹೆಚ್ಚುವರಿಯಾಗಿ 11 ಎಂಐ-17 ವಿ5, ಎರಡು ಚೇತಕ್, ಮೂರು ಚೀತಾ ಮತ್ತು ಏಳು ಎಂಐ-17 ಹೆಲಿಕಾಪ್ಟರ್ ಗಲು ಸೇರಿದಂತೆ ಸುಮಾರು 25 ಹೆಲಿಕಾಪ್ಟರ್ ಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.
ಮೇ 26ರ ಸಂಜೆಯೊಳಗೆ ಗಂಟೆಗೆ 155-165 ಕಿಲೋ ಮೀಟರ್ ವೇಗ ಮತ್ತು 185 ಕಿ.ಮೀಟರ್ ಬಿರುಗಾಳಿಯೊಂದಿಗೆ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಯನ್ನು ದಾಟುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.