ಉದ್ಯೋಗ ನೀಡುವಲ್ಲಿ ತಾರತಮ್ಯ- ಎಂಆರ್’ಪಿಎಲ್ ವಿರುದ್ಧ ಸ್ಥಳೀಯರ ಭುಗಿಲೆದ್ದ ಆಕ್ರೋಶ

ಮಂಗಳೂರು ಮೇ.23: ಕರಾವಳಿಗರ ಜನರ ವ್ಯಾಪಕ ವಿರೋಧದ ನಡುವೆಯೇ ಆರಂಭಗೊಂಡ ಎಂಆರ್ ಪಿಎಲ್ ಸಂಸ್ಥೆ ಬಗ್ಗೆ ಸ್ಥಳೀಯ ಜನರು ಒಂದಲ್ಲಾ ಒಂದು ಕಾರಣಕ್ಕೆ ಈಗಲೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಮತ್ತೆ ಸಂಸ್ಥೆ ಯಲ್ಲಿ ಉದ್ಯೋಗ ನೀಡುವಲ್ಲಿ ತಾರತಮ್ಯವನ್ನು ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

14 ವರ್ಷಗಳ ಹಿಂದೆ ಅಂದರೆ 2007ರಲ್ಲಿ ಎಂಆರ್ ಪಿಎಲ್ ಸಂಸ್ಥೆ ಆರಂಭಗೊಂಡಾಗ ಸಂಸ್ಥೆಯ ವಿಸ್ತರಣೆಗೆ ಕಳವಾರು ಪೆರ್ಮುದೆ,ಕುತ್ತೆತ್ತೂರು,ಬಾಳ,ಬಜಪೆ ಗ್ರಾಮಗಳ 1,800ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆಹೊರಡಿಸಲಾಯಿತು. ಈ ಯೋಜನೆಯಿಂದ ಅದೆಷ್ಟೋ ಮಂದಿ ತಮ್ಮ ಫಲವತ್ತಾದ ಜಮೀನು ಕಳೆದುಕೊಂಡಿದ್ದರು. ಅಲ್ಲದೆ ಆರಂಭದಲ್ಲಿ  ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಜನಪರ, ಜನವಿರೋಧಿ ಪಕ್ಷಗಳೆಲ್ಲವೂ ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಗಳು ಬಂದರೆ ಉದ್ಯೋಗಾವಕಾಶ ಸಿಗುತ್ತದೆ. ನಾವು ಇದಕ್ಕೆ ಬೆಂಬಲಿಸಬೇಕು ಎಂಬ ಧೋರಣೆಯನ್ನು ಜನರ ಮನದಲ್ಲಿ ತುಂಬದ್ದವು.

ಆದರೆ ಜಮೀನು ಕಳೆದುಕೊಂಡವರಿಗೆ ಉದ್ಯೋಗವಕಾಶ ಮಾತ್ರ ಮರೀಚಿಕೆಯಾಗಿದೆ. 2007ರಿಂದ 2021ರವರೆಗೆ ಪ್ರತೀ ವರ್ಷ ಉದ್ಯೋಗ ನೇಮಕಾತಿಯನ್ನು ಎಂಆರ್‌ಪಿಎಲ್, ಒಎನ್‌ಜಿಸಿ ಮಾಡುತ್ತದೆ. ವಿಪರ್ಯಾಸ ಅಂದ್ರೆ ಈ ನೇಮಕಾತಿ ಯಲ್ಲಿ ಯಾವತ್ತೂ ಭೂಮಿ ಕಳೆದುಕೊಂಡವರಿಗೆ ಪ್ರಾಧಾನ್ಯತೆ ಮಾತ್ರ ಕೊಡಲೇ ಇಲ್ಲ. ಅಲ್ಲದೆ ಎಂಆರ್‌ಪಿಎಲ್ ನ 184 ನೇಮಕಾತಿಗಳ ಪೈಕಿ12 ಹುದ್ದೆಗಳನ್ನು ಮಾತ್ರ ಕನ್ನಡಿಗರಿಗೆ ನೀಡಿ ಉಳಿದ 172 ಉದ್ಯೋಗಗಳನ್ನು ಬೇರೆರಾಜ್ಯಗಳಿಗೆ ನೀಡಲಾಗಿದೆ. ಸ್ಥಳೀಯ ಜನರಿಗೆ ಇಷ್ಟೆಲ್ಲಾ ಅನ್ಯಾಯ ಆಗುತ್ತಿದ್ದರೂ ಕರಾವಳಿಯ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2007ರಲ್ಲಿ ಕಳವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಐಎಡಿಬಿ ಮತ್ತು ವಿಶೇಷ ಆರ್ಥಿಕ ವಲಯ ಅಧಿಕಾರಿಗಳು ಏರ್ಪಡಿಸಿದ್ದ ಗ್ರಾಮಸ್ಥರ ಸಭೆಯಲ್ಲಿ ಭೂಮಿ ನೀಡಿದರೆ ಪರಿಹಾರದ ಜೊತೆಗೆ ಉದ್ಯೋಗ ನೀಡಲಾಗುತ್ತದೆ ಎಂಬುದನ್ನೇ ಅಧಿಕಾರಿಗಳು ಹೇಳುತ್ತಿದ್ದರು. ಆದರೆ ಯಾವ ಕೆಲಸ? ಎಷ್ಟು ಹುದ್ದೆಗಳು? ವಿದ್ಯಾರ್ಹತೆ ಏನೇನು? ವಿಂಗಡಣೆ ಮಾಡಿದ ಲಿಸ್ಟ್ ಕೊಡಿ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. ಆಗ ಈಗ 184 ಎಂಆರ್‌ಪಿಎಲ್ ಉದ್ಯೋಗದ ಪೈಕಿ ಕೇವಲ 12 ಉದ್ಯೋಗವನ್ನು ಮಾತ್ರ ಕನ್ನಡಿಗರಿಗೆ ನೀಡಿದ್ದಾರೆ. ಈ ಪೈಕಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ ತಲಾ ಇಬ್ಬರಿಗೆ ಅವಕಾಶ ದೊರೆತಿದೆ. ಎಂದು ಪತ್ರಿಕೆಯೊಂದು ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರೀ ಹೋರಾಟದ ಬಳಿಕ ಈ ಯೋಜನೆಗಾಗಿ ಭೂ ಸ್ವಾದೀನಕ್ಕೆ ನಿಗದಿ ಮಾಡಿದ್ದ 2,035 ಎಕರೆ ಫಲವತ್ತಾದ ಕೃಷಿ ಭೂಮಿ ಉಳಿಸಿಕೊಳ್ಳಲಾಯಿತು.ಆದರೆ 1,800 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಈ ಯೋಜನೆಯಿಂದ ಭೂಮಿ ಕಳೆದುಕೊಂಡವರು ಉದ್ಯೋಗಕ್ಕಾಗಿ ಈಗಲೂ ಹೋರಾಟ ನಡೆಸುತ್ತಿದ್ದಾರೆ. ಫಲವತ್ತಾದ ಭೂಮಿ ಕಳೆದು ಕೊಂಡಿರುವುದು ಒಂದೆಡೆಯಾದರೆ ನೀಡಿದ ಭರವಸೆಯಂತೆ ಉದ್ಯೋಗ ದೊರಕದೆ ಮತ್ತೊಂದೆಡೆ ಈ ಭಾಗದ ಜನರು ಉದ್ಯೋಗದಿಂದ ವಂಚಿತರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!