ಮೇ.24: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆನ್‌ಲೈನ್ ಚಳುವಳಿ
ಉಡುಪಿ ಮೇ.23(ಉಡುಪಿ ಟೈಮ್ಸ್ ವರದಿ): ರಾಜ್ಯದ 42,000 ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮೇ.24 ರಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ತಮ್ಮ ತಮ್ಮ ಕೆಲಸದ ಸ್ಥಳದಿಂದ ಅಥವಾ ಮನೆಯಿಂದ ರಾಜ್ಯವ್ಯಾಪಿ ಆನ್‌ಲೈನ್ ಚಳುವಳಿ ನಡೆಸಲು ನಿರ್ಧರಿಸಿದ್ದಾರೆ.
ಈ ನಿಟ್ಟಿನಲ್ಲಿ ಮೇ.20 ರಂದು, ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರ ಆನ್ ಲೈನ್ ಸಭೆ ನಡೆಸಿದ್ದು ಈ ಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಕೊಡದ ಇಲಾಖೆಯ ಅಮಾನವೀಯ ನಡೆ ವಿರುದ್ಧ, ಕೋವಿಡ್ ಕೆಲಸಕ್ಕೆ ಇತರ ವಾರಿರ್ಸ್ ಗಳಿಗೆ ಕೋವಿಡ್ ಅಪಾಯ ಭತ್ಯೆ ಮಾಸಿಕ ರೂ.5,000 ನೀಡಿದಂತೆ ಆಶಾಗಳಿಗೂ ನೀಡಲು ಒತ್ತಾಯಿಸಿ (ರಿಸ್ಕ್ ಅಲೊಯನ್ಸ್) ಕೋವಿಡ್ 2ನೇ ಅಲೆಯಲ್ಲಿ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ರೂ.25,000 ಕಳೆದ ವರ್ಷ ಕೋವಿಡ್ 1ನೇ ಅಲೆಯಲ್ಲಿ ಮತ್ತು2ನೇ ಅಲೆಯಲ್ಲಿ ಸೋಂಕಿನಿಂದ ಸಾವಿಗೀಡಾದ ಕುಟುಂಬಕ್ಕೆ ಈಗಾಗಲೇ ಘೋಷಣೆಯಾದ 50 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿ, ಮಾಸಿಕ ಗೌರವಧನ ರೂ.4000 ಕಳೆದ ಎರಡು ತಿಂಗಳ ಬಾಕಿ ಬಿಡುಗಡೆಗೆ ಆಗ್ರಹಿಸಿ ಮೇ.24 ರಂದು ರಾಜ್ಯವ್ಯಾಪಿ ಆನ್‌ಲೈನ್ ಚಳುವಳಿ ನಡೆಸಲು ನಿರ್ಧರಿಸಲಾಯಿತು.
ಇದರೊಂದಿಗೆ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಭಾಗವಹಿಸಿದ ಆಶಾಕಾರ್ಯಕರ್ತೆಯರ ಸಂಘದ ಮುಖಂಡರು ಸುಮಾರು 3 ಗಂಟೆಗಳ ಕಾಲ ತಾವು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ, ಕೆಲಸ ಮಾಡಲು ಅಡ್ಡಿಯಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಂದರೆ ಇಲಾಖೆ ಮತ್ತು ಪಂಚಾಯಿತಿ, ಜನಗಳು ಮತ್ತು ಟಾಸ್ಕ್ ಫೋರ್ಸ್ ಸಮಿತಿಯಿಂದ ಆಗುತ್ತಿರುವ ವಿವಿಧರೀತಿಯ ಸಮಸ್ಯೆಗಳ ಕುರಿತು ಚರ್ಚಿಸಿದರು. ಮತ್ತೊಂದೆಡೆ ಕುಟುಂಬದ ಸದಸ್ಯರ ಆತಂಕ-ಭಯಗಳ ಮದ್ಯೆ ಅವರು ಎದುರಿಸುತ್ತಿರುವ ನೋವು-ಕಷ್ಟಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಬಹುತೇಕ ಕಡೆಗಳಲ್ಲಿ ಆಶಾಕಾರ್ಯಕರ್ತೆಯರ ಕೈಗೆ ಆಕ್ಸಿಮೀಟರ್ ಕೊಟ್ಟು ಸೋಂಕಿತರನ್ನು ಪರೀಕ್ಷಿಸಲು ಕಳುಹಿಸಿ ಅಗತ್ಯವಿರುವ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಕೋವಿಡ್ 2 ನೇ ಅಲೆಯಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ 5 ಆಶಾ ಕಾರ್ಯಕರ್ತೆ ಯರು ಕೋವಿಡ್‌ಯಿಂದ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಸುಮಾರು 1000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವಾರಿಯರ್ಸ್ ಗಳ ಬಗ್ಗೆ ಕಾಳಜಿ ಮುತುವರ್ಜಿ ವಹಿಸಬೇಕೆಂದು ಇಲಾಖೆಯನ್ನು ಹಾಗೂ ಸರ್ಕಾರವನ್ನು ಒತ್ತಾಯಿಸಿ ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲು ಆನ್ ಲೈನ್ ಚಳುವಳಿ ನಡೆಸುವುದಾಗಿ ಸಭೆಯ ನಿರ್ಧಾರಿಸಲಾಯಿತು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.