ಕಾರ್ಕಳ, ಮೇ 22: ಅನಾರೋಗ್ಯದಿಂದ ಗುಣಮುಖರಾಗಿದ್ದರೂ ಮನೆಯ ಬಾಡಿಗೆ ನೀಡಲೂ ಹಣ ಇಲ್ಲದೆ ಕುಟುಂಬ ವೊಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲೇ ಉಳಿದು ಕೊಂಡ ಬಗ್ಗೆ ವರದಿಯಾಗಿದೆ. ಅನಾರೋಗ್ಯದ ಕಾರಣ ಮೂಡಬಿದಿರೆ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರನ್ನು ನೋಡಿಕೊಳ್ಳಲು ಪತಿ ವಿವೇಕ್ ಮತ್ತು ಮಗ ಅಕ್ಷಯ್ ಜೊತೆಗಿದ್ದರು. ಕೆಲವು ದಿನಗಳ ನಂತರ ಪಾರ್ವತಿ ಅನಾರೋಗ್ಯದಿಂದ ಗುಣಮುಖರಾಗಿದ್ದರು. ಆದರೆ ಮನೆಯ ಬಾಡಿಗೆ ನೀಡಲೂ ಅಸಾಯಕರಾಗಿ ಇವರೆಲ್ಲ ಮನೆಗೆ ತೆರಳಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿಯೇ ಉಳಿದು ಕೊಂಡಿದ್ದರು.
ರೋಗಿ ಗುಣಮುಖರಾದ ನಂತರ ಹೆಚ್ಚು ದಿನ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಅವಕಾಶ ಇಲ್ಲದ ಕಾರಣ ವೈದ್ಯರೊಬ್ಬರು ಈ ಬಗ್ಗೆ ಪುರಸಭಾ ಸದಸ್ಯ ಶುಭದ ರಾವ್ ಅವರಿಗೆ ಮಾಹಿತಿ ನೀಡಿದರು. ಅದರಂತೆ ಶುಭದ ರಾವ್ ಅವರು ಪಾರ್ವತಿ ಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಅವರ ಜೊತೆಯಿದ್ದ ಪತಿ ಮತ್ತು ಮಗನನ್ನು ಅವರ ಒಪ್ಪಿಗೆಯಂತೆ ಜರಿಗುಡ್ಡೆಯಲ್ಲಿರುವ ಸುರಕ್ಷಾ ಆಶ್ರಮಕ್ಕೆ ಸೇರಿಸಿ ತಕ್ಷಣಕ್ಕೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಈಗಾಗಲೇ ಸುಮಾರು 50ಕ್ಕೂ ಅಧಿಕ ಅಸಹಾಯಕರಿಗೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡುತ್ತಿರುವ ಆಯಿಷಾರವರು ಪಾರ್ವತಿ ಕುಟುಂಬದವರನ್ನು ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ. | | |