ಉಡುಪಿ: ಬ್ಲ್ಯಾಕ್ ಫಂಗಸ್’ಗೆ ಜಿಲ್ಲೆಯಲ್ಲಿ ಮೊದಲ ಬಲಿ
ಉಡುಪಿ, ಮೇ 22: ಕೋವಿಡ್‌ಗೆ ಪಾಸಿಟಿವ್ ಬಂದು, ಮಧುಮೇಹ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕಪ್ಪು ಶಿಲೀಂದ್ರ ಸೋಂಕಿಗೆ ಜಿಲ್ಲೆಯಲ್ಲಿ ಮೊದಲ ಬಲಿಯನ್ನು ಪಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾಗಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆಯಲ್ಲಿದ್ದ ಸಂತೆಕಟ್ಟೆಯ 76 ವರ್ಷ ಪ್ರಾಯದ ಮಹಿಳೆ ಇಂದು ಮೃತಪಟ್ಟಿದ್ದಾರೆ.
ಇನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಬ್ಲ್ಯಾಕ ಫಂಗಸ್ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದ ಹರಿಹರ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಧಾರವಾಡ ಹಾಗೂ ರಾಣಿಬೆನ್ನೂರು ಜಿಲ್ಲೆಗಳ ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪಡುಬಿದ್ರಿ ಸಮೀಪದ ನಂದಿಕೂರಿನ 45 ವರ್ಷದ ಪುರುಷರೊಬ್ಬರು ಚೇತರಿಸಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ
ಇಂದು ಹೊರಜಿಲ್ಲೆಯ ಇನ್ನೊಬ್ಬರು ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲೀಗ ಇಬ್ಬರು ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.