ಪ್ಯಾಕೇಜ್ ಘೋಷಣೆಯಲ್ಲಿ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಡೆಗಣನೆ- ಮಾಜಿ ಸಚಿವ ಸೊರಕೆ
May 22, 2021
ಉಡುಪಿ:ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ದೌನ್ನಿಂದಾಗಿ ದಿನ ನಿತ್ಯದ ಆದಾಯವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಕಾರ್ಮಿಕರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಪಕ್ಷದ ತೀವ್ರ ಒತ್ತಡ ಮತ್ತು ಆಗ್ರಹದ ಪರಿಣಾಮವಾಗಿ ಕೊನೆಗೂ ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಎರಡನೇ ಅಲೆಯ ಲಾಕ್ದೌನ್ ಪ್ಯಾಕೇಜ್ ಘೋಷಣೆ ಮಾಡಿದ್ದು ಇದರಲ್ಲಿ ಪ್ರಮುಖವಾದ ಹಿಂದುಳಿದ ವರ್ಗ, ಪ್ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿ ಕಾಪಾಡದೇ ನಿರ್ಲಕ್ಷಿಸಿರುವುದು ತೀರಾ ವಿಷಾದನೀಯ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪ್ರಮುಖ ಹಿಂದುಳಿದ ವರ್ಗಗಳಲ್ಲೊಂದಾದ ಬಿಲ್ಲವ ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಹಣಕಾಸು ನೆರವನ್ನು ನೀಡಿ ಸ್ತ್ರೀ-ಶಕ್ತಿ ಸ್ವ-ಸಹಾಯ ಸಂಘಗಳನ್ನು ಉತ್ತೇಜಿಸುವ ಆಶ್ವಾಸನೆ ಕಾರ್ಯಗತಗೊಂಡಿದ್ದರೆ ಈ ಸಂದರ್ಭದಲ್ಲಿ ಪ್ರಯೋಜನವಾಗುತ್ತಿತ್ತು. ಆದರೆ ಇಂದಿಗೂ ಘೋಷಣೆಯೂ ಆಗದೆ ಕಾರ್ಯಗತವೂ ಆಗದೆ ಕೇವಲ ಆಶ್ವಾಸನೆಯಾಗಿಯೇ ಉಳಿಯುವ ಮೂಲಕ ಹಾಗೂ ಲಾಕ್ದೌನ್ ಪ್ಯಾಕೇಜ್ ನಲ್ಲಿಯೂ ಬಿಲ್ಲವ ಸಮುದಾಯ ವನ್ನು ಕಡೆಗಣಿಸಲಾಗಿದೆ.
ತನ್ನ ಜೀವದ ಹಂಗನ್ನು ತೊರೆದು ಜೀವನೋಪಾಯಕ್ಕಾಗಿ ಮೀನುಗಾರಿಕಾ ವೃತ್ತಿಯನ್ನು ನಡೆಸುವ ಮೊಗವೀರರು ಹಾಗೂ ಮೀನು ವ್ಯಾಪಾರ ನಡೆಸುವ ಇತರ ವೃತ್ತಿಭಾಂದವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದೆ ದ್ರೋಹವೆಸಲಾಗಿದೆ.
ಲಾಕ್ದೌನ್ ಕಾರಣದಿಂದ ಯಾವುದೇ ಶುಭಸಮಾರಂಭಗಳು ನಡೆಯದೇ ಇರುವುದರಿಂದ ದೇವಾಡಿಗ ಸಮುದಾಯದವರು ಯಾವುದೇ ಆದಾಯದ ಮೂಲವಿಲ್ಲದೇ ಸಂಕಷ್ಟದಲ್ಲಿದ್ದರೂ ಸರ್ಕಾರದ ಸಹಾಯ ಇವರಿಗಲ್ಲವಾಗಿದೆ.ತಮ್ಮ ಕುಲ ಕಸುಬನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿರುವ ಕುಂಬಾರ ಸಮಾಜಕ್ಕೆ ಹಾಗೂ ಮರದ ಕೆಲಸ ಮತ್ತು ಕಬ್ಬಿಣದ ಕೆಲಸ ಮಾಡಿ ದುಡಿಮೆ ಮಾಡುತ್ತಿದ್ದ ವಿಶ್ವಕರ್ಮ ಸಮಾಜ ಬಾಂಧವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಅದೇ ರೀತಿ ಹಿಂದುಳಿದ ವರ್ಗಗಳ ಜಾತಿಗಳಾದ ಶೆಟ್ಟಿಗಾರ,ಗಾಣಿಗ ಮತ್ತು ಜೋಗಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಾಗೂ ಬೀಡಿ ಕಾರ್ಮಿಕರಿಗೆ ಮತ್ತು ಎಲ್ಲಾ ಸಮಾಜದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಪ್ಯಾಕೇಜ್ ನೀಡದೆ ಕಡೆಗಣಿಸಲಾಗಿದೆ ಅದೇ ರೀತಿ ದೇವಸ್ಥಾನ, ಗರಡಿಗಳಲ್ಲಿ ಕೆಲಸ ಮಾಡುವ ಅರ್ಚಕರು ಮತ್ತು ಚಾಕರಿ ಮಾಡುವವರನ್ನು ಹಾಗೂ ನಲ್ಕೆಯವರನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಸಹಾಯಧನವನ್ನು ಘೋಷಿಸದೇ ವಂಚಿಸಲಾಗಿದೆ.
ಕೂಲಿ ಕೆಲಸ ಮಾಡಿ ದುಡಿದು ತಿನ್ನುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಪರಿಸ್ಥಿತಿ ಲಾಕ್ದೌನನಿಂದಾಗಿ ತೀರಾ ಹದಗೆಟ್ಟಿದ್ಫು ಈ ವರ್ಗದ ಜನರಿಗೆ ಯಾವುದೇ ಸಹಾಯ ನೀಡದಿರುವುದರ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಮಾಜಿ ಸಚಿವರಾದ ಸೊರಕೆಯವರು ಕೂಡಲೇ ಈ ಎಲ್ಲಾ ಜಾತಿ ಮತ್ತು ವರ್ಗಗಳ ಜನರಿಗೆ ಸೂಕ್ತ ಪ್ಯಾಕೇಜನ್ನು ಸರ್ಕಾರ ಕೂಡಲೇ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಇದೀಗ ಘೋಷಣೆ ಮಾಡಿರುವ 1,500-3,000 ರೂ.ಗಳ ಪ್ಯಾಕೇಜ್ ಇಂದಿನ ದುಬಾರಿಯಾದ ದಿನಸಿ ಸಾಮಾಗ್ರಿ, ಆಡುಗೆ ಆನಿಲದ ಮುಂದೆ ತೀರ ಅತ್ಯಲ್ಪವಾಗಿದ್ದು ಈ ಮೊತ್ತವನ್ನು ಹೆಚ್ಚಿಸಿ ಎಲ್ಲ ಹಿಂದುಳಿದ ವರ್ಗಗಳ ಮತ್ತು ಪ.ಜಾತಿ ಮತ್ತು ಪಂಗಡಗಳ ಜನರಿಗೂ ವಿಸ್ತರಿಸಬೇಕೆಂದು ಸೊರಕೆಯವರು ಆಗ್ರಹಿಸದ್ದಾರೆ. ಮುಖ್ಯಮಂತ್ರಿಗಳು ರೂ.1250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆಂದು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ವೈಭವೀಕರಿಸುತಿದು ನೆರೆಯ ಹಾಗೂ ಅತಿ ಸಣ್ಣ ರಾಜ್ಯವಾದ ಕೇರಳದಲ್ಲಿ ರೂ 20000 ಕೋಟಿ ಪ್ಯಾಕೇಜನ್ನು ಜನಸಾಮಾನ್ಯರಿಗೆ ನೀಡಿದ್ದು ಇದನ್ನು ಮುಖ್ಯಮಂತ್ರಿಗಳು ತಿಳಿಯಬೇಕಾಗಿದೆ.
ಪ್ಯಾಕೇಜ್ ಹಣವನ್ನು ಮುಖ್ಯಮಂತ್ರಿಗಳು ಅಥವಾಸಚಿವರ ಕೈಯಿಂದ ನೀಡುತ್ತಿಲ್ಲ ಇದು ಜನರ ತೆರಿಗೆ ಹಣದಿಂದ ನೀಡುವಂತದ್ದು. ಆದ್ದರಿಂದ ಶೀಘ್ರ ಕಾರ್ಯಗ್ರತಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಪ್ಯಾಕೇಜ್ ಪಡೆಯಲು ನಿಗದಿಪಡಿಸಿರುವ ಅರ್ಹತೆ ಮತ್ತು ನಿಯಮಗಳನ್ನು ಸಡಿಲುಪಡಿಸಬೇಕು ಇಲ್ಲವಾದಲ್ಲಿ ಒಟ್ಟು 10 ಶೇಕಡಾ ಫಲನುಭವಿಗಳಿಗೂ ತಮ್ಮ ಪ್ಯಾಕೇಜ್ ತಲುಪುವುದು ಕಷ್ಟಕರ ಎಂದು ಮಾಜಿ ಸಚಿವರು ತಿಳಿಸಿದ್ದಾರೆ. ಯಾಕೆಂದರೆ ಮೊದಲನೆಯ ಅಲೆಯ ಲಾಕ್ದೌನ್ ಪ್ಯಾಕೇಜ್ ಇನ್ನೂ ಕೂಡ ಪರಿಣಾಮಕಾರಿಯಾಗಿ ಕಾರ್ಯಗತಗೊಂಡಿಲ್ಲದ ಕಾರಣ, ಅದರಂತೆ ಎರಡನೇ ಅಲೆಯ ಪ್ಯಾಕೇಜ್ ಕೂಡಾ ಘೋಷನೆಯಾಗಿಯೇ ಉಳಿಯದೆ ರೋಗ ಹತೋಟಿ ಯೊಂದಿಗೆ ಸಾರ್ವಜನಿಕರ ಹಸಿವು ನೀಗಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ವಿನಯ್ ಕುಮಾರ್ ಸೊರಕೆಯವರು ಆಗ್ರಹಿಸಿದ್ದಾರೆ.