ಮಂಗಳೂರು: ವಿದೇಶದಲ್ಲಿ ಇರುವ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸಲು ‘ಸಮನ್ವಯ’ ಹೆಲ್ಪ್‌ಲೈನ್‌

ಮಂಗಳೂರು ಮೇ.22: ಜಿಲ್ಲೆಯ ಅನೇಕ ಮಂದಿ ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ  ವಿದೇಶದಲ್ಲಿ ಇರುವ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸಲು ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಕೋವಿಡ್ ‘ಸಮನ್ವಯ’ ಹೆಲ್ಪ್‌ಲೈನ್‌ ಆರಂಭಿಸಲಾಗಿದೆ.

ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಜೊತೆ ‘ಸಮನ್ವಯ’ ಎಂಬ ವೆಬಿನಾರ್ ಮೂಲಕ ಸಂವಾದ ನಡೆಸಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್‌ ಅವರು ಸಹಾಯವಾಣಿ ಸಂಖ್ಯೆ  9480802300 ಗೆ ಚಾಲನೆ ನೀಡಿದರು.

ಕುವೈತ್, ಕೆನಡಾ, ಯುಎಸ್‌ಎ, ಯುಎಇ, ಕತಾರ್, ಒಮಾನ್, ಸೌದಿ ಅರೇಬಿಯಾ, ನ್ಯೂಝಿಲೆಂಡ್, ಆಸ್ಟ್ರೇಲಿಯಾ, ಲಂಡನ್, ಇಸ್ರೇಲ್, ಬಹರೈನ್, ಹಾಂಕಾಂಗ್, ಜರ್ಮನಿ ಸೇರಿದಂತೆ 20 ರಾಷ್ಟ್ರಗಳಿಂದ 100ಕ್ಕೂ ಅಧಿಕ ಮಂದಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮ ಸಮಸ್ಯೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ  ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿದೇಶದಲ್ಲಿ ಸಿಲುಕಿರುವ ನಮ್ಮಂತಹ ಅನೇಕ ಮಂದಿಯ ಕುಟುಂಬಸ್ಥರು ಊರಿನಲ್ಲಿ ಗೊಂದಲದಲ್ಲಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಪೊಲೀಸ್ ಆಯುಕ್ತರು ನೆರವಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಸಂವಾದದಲ್ಲಿ ಎನ್ಆರ್ ಐಗಳು ಪಾಲ್ಗೊಂಡವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‌

ಈ ವೇಳೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್  ಅವರು, ಅನಿವಾಸಿ ಭಾರತೀಯರು ಯಾವುದೇ ನೆರವಿಗಾಗಿ, ಸಹಾಯವಾಣಿ ಸಂಖ್ಯೆಗೆ ಸಂದೇಶ ಅಥವಾ ವಾಯ್ಸ್ ರೆಕಾರ್ಡ್, ವೀಡಿಯೋ ಸಂದೇಶ ಕಳುಹಿಸಿದಾಗ, ಸಂಬಂಧ ಪಟ್ಟವರಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು  ಹೇಳಿದ್ದಾರೆ. ಈಗಾಗಲೇ ಮಂಗಳೂರಿನ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಕೋವಿಡ್ ಸಂಕಷ್ಟದ ಸಮಯದಲ್ಲಿ ನೆರವು ನೀಡುವ ಕಾರ್ಯ ಮಾಡುತ್ತಿದೆ. ಆಹಾರ ವಿತರಣೆ, ರಕ್ತ ಮತ್ತು ಪ್ಲಾಸ್ಮಾ ಸಂಬಂಧಿಸಿದ ವ್ಯವಸ್ಥೆ, ಉಚಿತ ಆ್ಯಂಬುಲೆನ್ಸ್, ಆಸ್ಪತ್ರೆಗಳಲ್ಲಿ ಟೆಲಿ ಮೆಡಿಸಿನ್, ತುರ್ತು ಸಂದರ್ಭದಲ್ಲಿ ಖಾಸಗಿ ವಾಹನಗಳನ್ನು ಒದಗಿಸುವುದು, ಅಂತ್ಯಸಂಸ್ಕಾರ ಹೀಗೆ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಇವನ್ನು ಸಮನ್ವಯ ಎಂಬ ಒಂದೇ ವೇದಿಕೆಯಡಿ ತರಲಾಗಿದೆ. ಇವುಗಳ ಮೂಲಕ ಎನ್‌ಆರ್‌ಐಗಳ ಕುಟುಂಬಸ್ಥರಿಗೂ ತುರ್ತು ಸೇವೆಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನು ಸಾರ್ವಜನಿಕರು ಸ್ಥಳೀಯವಾಗಿ ಕೊರೋನಾ ಗೆ ಸಂಬಂಧಿಸಿ ಸಮಸ್ಯೆಗಳಿದ್ದರೆ ಪೊಲೀಸ್ ಕಂಟ್ರೋಲ್ ರೂಮ್ (9480802321)ಗೆ ಕರೆ ಮಾಡಬಹುದು. ಲಾಕ್‌ಡೌನ್ ನಿಯಮ ಉಲ್ಲಂಘನೆ, ಔಷಧ ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದ ವಂಚನೆ, ಬ್ಲಾಕ್‌ಮೇಲ್ ಮೊದಲಾದ ಘಟನೆಗಳ ಬಗ್ಗೆ 112 ಸಹಾಯವಾಣಿಗೂ ಕರೆ ಮಾಡಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

1 thought on “ಮಂಗಳೂರು: ವಿದೇಶದಲ್ಲಿ ಇರುವ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸಲು ‘ಸಮನ್ವಯ’ ಹೆಲ್ಪ್‌ಲೈನ್‌

Leave a Reply

Your email address will not be published. Required fields are marked *

error: Content is protected !!