ಅತ್ಯಾಧುನಿಕ ಸೈಬರ್ ದಾಳಿ- 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ
ಮುಂಬೈ ಮೇ 22: ಏರ್ ಇಂಡಿಯಾದ ಪ್ರಯಾಣಿಕರ ಸೇವಾ ವ್ಯವಸ್ಥೆ ಒದಗಿಸುವ ‘ಸಿಟಾ’ ಮೇಲೆ ನಡೆದ ಅತ್ಯಾಧುನಿಕ ಸೈಬರ್ ದಾಳಿಯಿಂದಾಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದಾಗಿ ವರದಿಯಾಗಿದೆ.
ಈ ವರದಿಯ ಪ್ರಕಾರ 2011ರ ಆ. 26ರಿಂದ 2021ರ ಫೆ. 3ರವರೆಗೆ ಈ ದಾಖಲೆಗಳು ಸೋರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಸಂಸ್ಥೆ “ನಾವು ಮತ್ತು ನಮ್ಮ ಡೇಟಾ ಪ್ರೊಸೆಸರ್ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದ್ದೇವೆ. ಪ್ರಯಾಣಿಕರು ತಮ್ಮ ವೈಯಕ್ತಿಕ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವಲ್ಲೆಲ್ಲಾ ಪಾಸ್‌ವರ್ಡ್‌ಗಳನ್ನು ಬದಲಾಯಿಸಿಕೊಳ್ಳಬೇಕು” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏರ್ ಇಂಡಿಯಾವು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ನಿಯಂತ್ರಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಜವಾಬ್ದಾರಿಗಳಿಗೆ ಅನುಗುಣವಾಗಿ ಘಟನೆಯ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದ್ದು ಇದರೊಂದಿಗೆ, ವಿಧಿವಿಜ್ಞಾನ ವಿಶ್ಲೇಷಣೆಯ ಮೂಲಕ ಅತ್ಯಾಧುನಿಕತೆಯ ಮಟ್ಟ ಮತ್ತು ವ್ಯಾಪ್ತಿಯನ್ನು ಕಂಡುಹಿಡಿಯ ಲಾಗುತ್ತಿದೆ. ಘಟನೆಯ ನಂತರ ವ್ಯವಸ್ಥೆಯೊಳಗೆ ಯಾವುದೇ ಅನಧಿಕೃತ ಚಟುವಟಿಕೆ ಪತ್ತೆಯಾಗಿಲ್ಲ ಎಂದು ಸಿಟಾ ದೃಢಪಡಿಸಿದೆ.