ಪರಿಹಾರ ಘೋಷಣೆ ಮಲ್ಲಿಗೆ ಕೃಷಿಕರಿಗೆ ನಿಷ್ಪ್ರಯೋಜಕ: ಕೃಷಿಕ ಸಂಘ

ಉಡುಪಿ: ಲಾಕ್‌ಡೌನ್‌ನಿಂದಾಗಿ ತೊಂದರೆಗೀಡಾದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರವು ಹೆಕ್ಟೇರಿಗೆ 10 ಸಾವಿರ ರೂ.ಗಳ ಪರಿಹಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಸರಕಾರ ಘೋಷಿಸಿರುವ ಈ ಪರಿಹಾರ ನಮ್ಮ ಕರಾವಳಿ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಕುಟುಂಬಗಳು ತೊಡಗಿಸಿಕೊಂಡಿರುವ ಮಲ್ಲಿಗೆ ಹೂವಿನ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಕಾಣುತ್ತಿಲ್ಲ.

ಏಕೆಂದರೆ ಜಿಲ್ಲೆಯ ಅಧಿಕ ಮಲ್ಲಿಗೆ ಬೆಳೆಗಾರರು ತುಂಡು ಭೂಮಿ ಹಿಡುವಳಿದಾರರು. ತೀರಾ ಅಲ್ಪ ಪ್ರಮಾಣ 1 ಸೆಂಟ್ಸ್ ನಿಂದ 5 ಸೆಂಟ್ಸ್- ಜಮೀನಿನಲ್ಲಿ 10ರಿಂದ50 ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ. ವಾರ್ಷಿಕವಾಗಿ ಮಲ್ಲಿಗೆ ಗಿಡ ಒಂದರ ನಿರ್ವಹಣೆ ಉತ್ಪಾದನಾ ವೆಚ್ಚ ಒಂದು ಸಾವಿರ ರೂ.ಗಳಷ್ಟು ಇರುತ್ತದೆ. ಇಷ್ಟು ಖರ್ಚಿನ ಬೆಳೆ ಬೇರೆ ಯಾವುದೂ ಇಲ್ಲ. ಆದರೂ ದಿನ ನಿತ್ಯದ ಬೆಳೆಯಾಗಿ, ಹೂವಿಗೆ ಪ್ರತಿದಿನವೂ ಬೇಡಿಕೆ ಇರುವುದರಿಂದ ಜಿಲ್ಲೆಯಲ್ಲಿ ಈ 40 ಸಾವಿರ ಕುಟುಂಬಗಳು ಮಲ್ಲಿಗೆ ಕೃಷಿಯನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿವೆ. ಇಳುವರಿ ಇದ್ದಾಗ ಬೇಡಿಕೆ ಇರುವುದಿಲ್ಲ. ಬೇಡಿಕೆ ಇರುವಾಗ ಇಳುವರಿ ಇರುವುದಿಲ್ಲ. ಆದರೂ ವರ್ಷದಲ್ಲಿ ಮಾರ್ಚ್‌ನಿಂದ ಮೇ ತಿಂಗಳುಗಳು ಮಲ್ಲಿಗೆ ಹೂವಿನ ಅತ್ಯಧಿಕ ಬೇಡಿಕೆಯ ದಿನಗಳು. ಮಲ್ಲಿಗೆ ಹೂವಿನ ಲಾಭದ ತಿಂಗಳುಗಳು. ಇದೇ ಕಾಲಘಟ್ಟದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲಾಕ್ ಡೌನ್ ಆದ ದೆಸೆಯಿಂದ ಮಲ್ಲಿಗೆ ಕೃಷಿ ಅಧಿಕ ಇಳುವರಿ ಇದ್ದರೂ ಬೇಡಿಕೆಯಿಲ್ಲದೆ ಆದಾಯವೂ ಇಲ್ಲದೆ ಕೃಷಿಕರು ಸಂಪೂರ್ಣವಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಪ್ರಸ್ತುತ ಸರಕಾರ ಘೋಷಿಸಿರುವ ಪರಿಹಾರವನ್ನು ಮೊತ್ತವನ್ನು ಜಿಲ್ಲೆಯ ಮಲ್ಲಿಗೆ ಕೃಷಿಭೂಮಿಗೆ ಅನ್ವಯಿಸಿದರೆ 1 ಸೆಂಟ್ಸ್
ನಿಂದ 5 ಸೆಂಟ್ಸ್ ಜಮೀನಿನಲ್ಲಿ ಮಲ್ಲಿಗೆ ಬೆಳೆಯುತ್ತಿರುವ ಕೃಷಿಕರಿಗೆ ಸಿಗುವ ಪರಿಹಾರ ರೂ. 40 ರಿಂದ ರೂ.200 ಮಾತ್ರ! ಒಂದು ಎಕ್ರೆ ಜಮೀನಿನಲ್ಲಿ ಗರಿಷ್ಠ 1200 ಗಿಡಗಳನ್ನು ನೆಡಲು ಬರುತ್ತದೆ. ಅಂದರೆ ಗಿಡ ಒಂದಕ್ಕೆ ರೂ.3/- ಪರಿಹಾರ ಸಿಕ್ಕಿದಂತಾಗುತ್ತದೆ! ಇದು ಕೆಲವರಿಗೆ ಪರಿಹಾರ ಸಂಬಂಧಿತ ದಾಖಲೆ ಪತ್ರಗಳನ್ನು ಒದಗಿಸಲು ಖರ್ಚು ಮಾಡಿದ ವೆಚ್ಚದಷ್ಟೂ ಆಗಿರುವುದಿಲ್ಲ. ಆದ್ದರಿಂದ ಸರಕಾರವು ಕರಾವಳಿಯ ಈ 40 ಸಾವಿರ ಕುಟುಂಬಗಳ ಮಲ್ಲಿಗೆ ಬೆಳೆಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತೀ ಗಿಡಕ್ಕೆ ಕನಿಷ್ಠ ರೂ. 200/-ರಂತೆ ಪರಿಹಾರ ದೊರೆಯಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಜಿಲ್ಲಾ ಕೃಷಿಕ ಸಂಘವು ಒತ್ತಾಯಿಸಿದೆ.

1 thought on “ಪರಿಹಾರ ಘೋಷಣೆ ಮಲ್ಲಿಗೆ ಕೃಷಿಕರಿಗೆ ನಿಷ್ಪ್ರಯೋಜಕ: ಕೃಷಿಕ ಸಂಘ

Leave a Reply

Your email address will not be published. Required fields are marked *

error: Content is protected !!