ಲಾಕ್ ಡೌನ್ ಉಲ್ಲಂಘಿಸಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪೂಜೆ- ಕ್ರಮ ಕೈಗೊಂಡ ಮಾಹಿತಿ ನೀಡಿ: ಹೈಕೋರ್ಟ್
ಬೆಂಗಳೂರು, ಮೇ 20: ಲಾಕ್ ಡೌನ್ ನಡುವೆಯೇ ಕೋವಿಡ್ ನಿಯಮ ಉಲ್ಲಂಘಿಸಿ ನಂಜನಗೂಡಿನಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕೋವಿಡ್ ನಿಯಮ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿ ವಕೀಲ ಜಿ.ಆರ್.ಮೋಹನ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ಸಲ್ಲಿಸಿದ್ದ ಮೆಮೋ ವಿಚಾರಣೆ ನಡೆಸಿದ ನ್ಯಾಯಪೀಠ, ಎಪಿಡೆಮಿಕ್ ಡಿಸೀಸ್ ಕಾಯ್ದೆಯಡಿ ಆರೋಪಿಯ ನಡಾವಳಿ ಅಪರಾಧದಿಂದ ಕೂಡಿದೆ. ಹೀಗಾಗಿ, ಎಫ್‌ಐಆರ್ ದಾಖಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ವಿಚಾರವಾಗಿ ಸರಕಾರ ಕೈಗೊಂಡ ಕ್ರಮದ ಬಗ್ಗೆಯೂ ಮಾಹಿತಿ ನೀಡುವಂತೆಯೂ ಸೂಚನೆ ನೀಡಿದೆ. ಮೆಮೋ ಬಗ್ಗೆ ಮೂಲ ಪ್ರಕರಣದೊಂದಿಗೆ ವಿಚಾರಣೆಗೆ ಹೈಕೋರ್ಟ್ ನಿರ್ಧಾರ ಮಾಡಿದೆ.
ಲಾಕ್‌ಡೌನ್ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪರ ಮಗನಿಂದಲೇ ಕೊರೋನ ಲಾಕ್‌ಡೌನ್ ಜಾರಿ ನಿಯಮ ಉಲ್ಲಂಘನೆ ಆದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಲಾಕ್‌ಡೌನ್ ನಡುವೆಯೂ ನಂಜನಗೂಡು ದೇಗುಲದಲ್ಲಿ ಬಿ.ವೈ. ವಿಜಯೇಂದ್ರ ಪೂಜೆ ಮಾಡಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ಜಿಲ್ಲಾ ಕಾಂಗ್ರೆಸ್ ಘಟಕ ಎಫ್‌ಐಆರ್ ದಾಖಲಿಸುವಂತೆ ದೂರು ನೀಡಿ, ದೇಗುಲ ಆಡಳಿತ ಮಂಡಳಿ, ಸರಕಾರಿ ಸಿಬ್ಬಂದಿ, ಪುರೋಹಿತ ವರ್ಗವನ್ನು ವಜಾ ಮಾಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.