| ಅಜೆಜಾರು ಮೇ.21(ಉಡುಪಿ ಟೈಮ್ಸ್ ವರದಿ): ಅಪರಿಚಿತರು ವ್ಯಕ್ತಿಯೊಬ್ಬರನ್ನು ಮಾರಣಾಂತಿಕ ಆಯುಧದಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಅಜೆಕಾರಿನಲ್ಲಿ ಮೇ.19ರಂದು ನಡೆದಿದೆ.
ಆನಂದ ಸೇರ್ವೆಗಾರ್ ಕೊಲೆಯಾದ ವ್ಯಕ್ತಿ.ಈ ಬಗ್ಗೆ ಗಣೇಶ್ ರಾವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಗಣೇಶ್ ರಾವ್ ಹಾಗೂ ಇತರ ಇಬ್ಬರು ಸೇರಿ ಆನಂದ ಸೇರ್ವೆಗಾರ್ ಅವರ ವಾಸದ ಮನೆ ಹಾಗೂ ಸುಮಾರು 4 ಎಕ್ರೆ ಜಮೀನನ್ನು ಜನವರಿಯಲ್ಲಿ ಖರೀದಿ ಮಾಡಿದ್ದರು. ಆನಂದ ಸೇರ್ವೆಗಾರ್‌ರವರು ಅದೇ ಮನೆಯಲ್ಲಿ ಗಣೇಶ್ ರಾವ್ ಅವರ ಅನುಮತಿ ಮೇರೆಗೆ ವಾಸವಾಗಿದ್ದರು. ಅಲ್ಲದೆ ಅವರ ಹೆಂಡತಿಯ ಅಕ್ಕನ ಮಗ ಹರೀಶ್ ಎಂಬವರು ಈ ಜಾಗದಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು, ಮದ್ಯಪಾನ ಮಾಡುವ ಚಟ ಹೊಂದಿದ್ದರು.
ಈತ ರಾತ್ರಿ ವೇಳೆ ಕುಡಿದು ಬಂದು ಆನಂದ ಸೇರ್ವೆಗಾರ್ ರವರ ಜೊತೆ ಗಲಾಟೆ ಮಾಡುತ್ತಿರುವ ವಿಚಾರ ಇತರರಿಂದ ತಿಳಿದು ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಮೇ.19 ರಂದು ಹರೀಶನು ಕೆಲಸ ಮುಗಿಸಿ ಗಣೇಶ್ ರಾವ್ ಅವರ ಮನೆಗೆ ಬಂದು ಸಂಬಳ ತೆಗೆದುಕೊಂಡು ಹೋಗಿದ್ದು ಬಳಿಕ ರಾತ್ರಿ ಮತ್ತೆ ಬಂದು, ಆನಂದ ಸೇರ್ವೆಗಾರ್‌ರವರು ಮನೆಯ ಹೊರಗಡೆ ಬಿದ್ದಿದ್ದು, ತಲೆಗೆ ಗಾಯವಾಗಿರುತ್ತದೆ, ಹಾಗೂ ಮಾತನಾಡುತ್ತಿಲ್ಲ ಎಂಬುದಾಗಿ ತಿಳಿಸಿದನು.
ಅದರಂತೆ ಗಣೇಶ್ ರಾವ್ ಅವರು ಆನಂದ ಸೇರ್ವೆಗಾರ್‌ರವರ 2 ನೇ ಮಗಳ ಗಂಡ ಸುರೇಶ್ ಹಾಗೂ ಎದುರು ಮನೆಯ ಪ್ರಭಾಕರ ಎಂಬವರನ್ನು ಜೊತೆಗೆ ಕರೆದುಕೊಂಡು ಹೋಗಿ ನೋಡಿದ್ದು, ಅಲ್ಲಿ ಆನಂದ ಸೇರ್ವೆಗಾರ್ ಅವರಿಗೆ ಯಾರೋ ಅಪರಿಚಿತರು ಬಲವಾದ ಆಯುಧದಿಂದ ತಲೆಗೆ ಹೊಡೆದು ಹಲ್ಲೆ ಮಾಡಿರುವುದು ಹಾಗೂ ಎಡಕೈಯ ಮಣಿಗಂಟಿಗೆ ನೈಲಾನ್ ರೋಪನ್ನು ಸುತ್ತಿ ಕಟ್ಟಿದ್ದು ಕಂಡುಬಂದಿರುತ್ತದೆ. ಬಳಿಕ ಪರೀಕ್ಷಿಸಿ ನೋಡಿದಾಗ ಆನಂದ ಸೇರ್ವೆಗಾರ್‌ರವರು ಮೃತಪಟ್ಟಿದ್ದು ತಿಳಿದು ಬಂದಿದೆ. ಅದರಂತೆ ಆನಂದ ಸೇರ್ವೆಗಾರ್ರನ್ನು ಯಾರೋ ಯಾವುದೋ ಕಾರಣದಿಂದ ಮಾರಕ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಗಣೇಶ್ ರಾವ್ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
| |