ಬಾಬಾ ರಾಮ್ ದೇವ್ ಕೊರೋನಾ ಔಷಧಿಗೆ ಆಯುಷ್ ಸಚಿವಾಲಯ ತಡೆ
ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಗೆ ತಾವು ಔಷಧಿ ಕಂಡು ಹಿಡಿದಿದ್ದು, ಇದಕ್ಕೆ ಏಳೇ ದಿನಗಳಲ್ಲಿ ಸೋಂಕಿತ ರೋಗಿಯನ್ನು ಗುಣಪಡಿಸುವ ಸಾಮರ್ಥ್ಯವಿದೆಯೆಂದು ಹೇಳಿಕೊಂಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೆ ಈಗ ತೀವ್ರ ಹಿನ್ನಡೆಯಾಗಿದ್ದು, ಅವರ ಐಷಧಿಗೆ ಆಯುಷ್ ಸಚಿವಾಲಯ ತಡೆ ನೀಡಿದೆ. ಅಲ್ಲದೆ ಔಷಧಿಗೆ ಸಂಬಂಧಿಸಿದಂತೆ ವಿವರ ನೀಡುವಂತೆ ಪತಂಜಲಿ ಸಂಸ್ಥೆಗೆ ಸೂಚಿಸಿದೆ.
ಪತಂಜಲಿ ಕಂಪನಿಯೂ ಕೊವಿಡ್-19 ಔಷಧಿ ಪರಿಶೀಲಿಸುವವರೆಗೆ, ಆ ಕುರಿತು ಜಾಹೀರಾತು ಮಾಡುವುದನ್ನು ನಿಲ್ಲಿಸಬೇಕು ಎಂದು ಆಯುಷ್ ಸಚಿವಾಲಯ ಆದೇಶಿಸಿದೆ.
ಕೊವಿಡ್-19 ಔಷಧಿ ಕುರಿತ ಪತಂಜಲಿ ಜಾಹೀರಾತು, ಔಷಧಗಳು ಮತ್ತು ಪರಿಹಾರಗಳ(ಆಕ್ಷೇಪಾರ್ಹ ಜಾಹೀರಾತುಗಳು)ಕಾಯ್ದೆ, 1954 ರ ಅಡಿ ಬರುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ ಕೊವಿಡ್ -19 ಚಿಕಿತ್ಸೆಗಾಗಿ ಕೊರೋನಿಲ್ ಔಷಧಿಗೆ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಉತ್ತರಾಖಂಡ್ ಸರ್ಕಾರದ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಆಯುಷ್ ಸಚಿವಾಲಯ ಸೂಚಿಸಿದೆ.
ಇಂದು ಬೆಳಗ್ಗೆಯಷ್ಟೇ ಬಾರಾ ರಾಮ್ ದೇವ್ ಅವರ ಪತಂಜಲಿ ಯೋಗಪೀಠ ಕೊರೋನಿಲ್ ಔಷಧಿ ಬಿಡುಗಡೆಗೊಳಿಸಿತ್ತು. ಪತಂಜಲಿ ಬಿಡುಗಡೆಗೊಳಸಿರುವ ಔಷಧಿಗೆ ಕೊರೋನಿಲ್ ಎಂಬ ಹೆಸರು ನೀಡಲಾಗಿದ್ದು, ಕೊರೋನಾ ವೈರಸ್ ಚಿಕಿತ್ಸೆಗೆ ಇದು ಪ್ರಭಾವಶಾಲಿಯಾಗಿದೆ ಎಂದು ಸಂಸ್ಥೆ ಹೇಳಿದೆ.
ಈ ಕುರಿತಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್ ಅವರು, ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ (PRI) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (NIMS), ಜೈಪುರ್ ಸಂಶೋಧಕರು ಜಂಟಿಯಾಗಿ ಈ ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಔಷಧಿಯನ್ನು ತಯಾರಿಸುವ ಕೆಲಸ ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಜಂಟಿಯಾಗಿ ನಡೆಸಲಿವೆ ಎಂದು ಹೇಳಿದರು.