ದ.ಕ: ಹೊಸ ಮಾರ್ಗಸೂಚಿ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿದ ಸಾಮಾಜಿಕ ಜಾಲತಾಣದ ವಿರುದ್ದ ದೂರು ದಾಖಲು
ಮಂಗಳೂರು ಮೇ.20(ಉಡುಪಿ ಟೈಮ್ಸ್ ವರದಿ): ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೊಂದು ಸುಳ್ಳು ಸುದ್ದಿಯಾಗಿದ್ದು, ದ.ಕ ಜಿಲ್ಲಾಡಳಿತದಿಂದ ಈ ರೀತಿ ಯಾವುದೇ ಆದೇಶ ಜಾರಿ ಮಾಡಿರುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೆ ಈ ರೀತಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು. ಹಾಗೂ ಸುಳ್ಳು ಸುದ್ದಿ ಪ್ರಚಾರ ಮಾಡುವ ಸಂಸ್ಥೆಯ ವಿರುದ್ಧವೂ ದೂರು ನೀಡಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಅವರು, ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಹೆಚ್ಚುವರಿ ನಿರ್ಬಂಧಕ ಕ್ರಮಗಳು ಜಾರಿಯಾಗಿರುವ ಬಗ್ಗೆ ವದಂತಿಗಳು ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲವುಂಟಾಗುತ್ತಿರುವುದು ಜಿಲ್ಲಾಡಳಿದ ಗಮನಕ್ಕೆ ಬಂದಿರುತ್ತದೆ.
ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇ.10 ರ ಬೆಳಿಗ್ಗೆ 6 ಗಂಟೆಯಿಂದ ಮೇ.24 ರ ಬೆಳಿಗ್ಗೆ 6 ಗಂಟೆ ವರೆಗೆ ಅನ್ವಯವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶಿಸಲಾಗಿದೆ, ಪ್ರಸ್ತುತ ಈ ಮಾರ್ಗಸೂಚಿಗಳು ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತವೆ.
ಮೇ.24 ರ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು, ಸಾರ್ವಜನಿಕರು ಯಾವುದೇ ವದಂತಿಗಳಿಂದ ಗೊಂದಲಕ್ಕೀಡಾಗದೆ ಜಿಲ್ಲಾಡಳಿತದಿಂದ ನೀಡಲಾಗುವ ನಿರ್ದೇಶನಗಳನ್ನು ಪಾಲಿಸಿ ಕೋಡ್ -19 ನಿಯಂತ್ರಣ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.