ಸಹಕಾರಿ ಸಂಘಗಳ ನೌಕರರಿಗೆ ವ್ಯಾಕ್ಸಿನೇಷನ್ ಹಾಗೂ ವಿಮಾ ಭದ್ರತೆ ನೀಡಿ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ: ಇಡೀ ಜಗತ್ತನ್ನೇ ಕಂಗಾಲು ಮಾಡಿರುವ ಕೊರೊನಾ ರೋಗವು ರಾಜ್ಯದಲ್ಲಿ ವಿಪರೀತವಾಗಿ ಹರಡಿದ್ದು, ರಾಜ್ಯದ ಜೊತೆಗೆ ಸಹಕಾರ ಕ್ಷೇತ್ರವನ್ನು ಕೂಡಾ ಕಂಗಾಲು ಮಾಡಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನಸೇವೆಯೇ ಜನಾರ್ದನ ಸೇವೆ ಎಂದು ಅರಿತು ಪರಸ್ಪರ ಸಹಕಾರದೊಂದಿಗೆ ಸೇವೆ ಸಲ್ಲಿಸುತ್ತಿರುವ ಸಹಕಾರಿ ನೌಕರರು. ಸದಸ್ಯರ ಮುಖದಲ್ಲಿ ಸದಾ ನಗು ಬಯಸುವ ಸಹಕಾರ ಕ್ಷೇತ್ರಕ್ಕೆ ಇತ್ತೀಚೆಗೆ ಎದುರಾದ ಸವಾಲು ಸಮಸ್ಯೆಗಳು ಒಂದೆರಡಲ್ಲ ಆದರೂ ಸೇವೆಗೆ ಹಿಂದೇಟು ಹಾಕಿಲ್ಲ. ಕೋವಿಡ್-19 ರ 2ನೇ ಅಲೆ ಹಾಗೂ ಮುಂದೆ ಬರಬಹುದಾದಂತಹ 3ನೇ ಅಲೆಯನ್ನು ಸಮಥವಾಗಿ ಎದುರಿಸಲು ಸಹಕಾರ ಸಂಘ ಸಂಸ್ಥೆಗಳು ಕಟಿಬದ್ದವಾಗಿ ಶ್ರಮಿಸುವ ಮೂಲಕ ಸರ್ಕಾರದ ಆದೇಶಗಳನ್ನು ಹಾಗೂ ಜನಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಘ ಸಂಸ್ಥೆಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಿವೆ.
ಆರ್ಥಿಕ ಸಂಕಷ್ಟಕ್ಕೀಡಾದವರಿಗೆ ಸಹಕಾರಿಗಳಿಗೆ ಮತ್ತು ಜನಸಾಮಾನ್ಯರುಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಬ್ಯಾಂಕಿಂಗ್, ಸಾವಿರಾರು ಪಡಿತರದಾರರ ಕುಟುಂಬಗಳಿಗೆ ಪಡಿತರ ಆಹಾರ ಧಾನ್ಯಗಳ ನಿರಂತರ ವಿತರಣೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರೂ ಹೈನುಗಾರರ ಕ್ಷೇಮಾಭಿವೃದ್ದಿಗೆ ದುಡಿಯುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರನ್ನು ನೇರವಾಗಿ ಸಂಪರ್ಕಿಸುತ್ತಿದ್ದಾರೆ. ಸೇವೆಯೇ ಸಹಕಾರ ಕ್ಷೇತ್ರದ ಮೂಲ ಮಂತ್ರ ಎಂಬ ತತ್ವಕ್ಕೆ ಬದ್ಧವಾಗಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಹಲವಾರು ಸಹಕಾರಿ ನೌಕರರು ಕೊರೊನಾಕ್ಕೆ ಬಲಿಯಾಗಿದ್ದು, ನೌಕರರಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿದೆ. ಆತಂಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬಗ್ಗೆ ಗಮನಹರಿಸದೇ ಇರುವುದು ಹಾಗೂ ಸಹಕಾರಿ ನೌಕರರನ್ನು ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸದೇ ಇರುವುದು ನೌಕರರ ಈ ದುಸ್ಥ್ತಿತಿಗೆ ಕಾರಣವಾಗಿದೆ.
ಸಹಕಾರ ಸಂಘಗಳ ನೌಕರರ ಕುಟುಂಬ ಹಾಗೂ ನೌಕರರ ಕ್ಷೇಮವು ಈ ಸಮಯದಲ್ಲಿ ಅಮೂಲ್ಯವಾಗಿದ್ದು, ಸಹಕಾರಿ ಸಂಘಗಳ ನೌಕರರನ್ನು ಕೊರೊನಾ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ ಪ್ರಥಮ ಪ್ರಾಶಸ್ತ್ಯ ನೀಡಿ ವ್ಯಾಕ್ಸಿನೇಷನ್ ನೀಡುವಂತೆ ಹಾಗೂ ಇಂತಹ ಸಿಬ್ಬಂದಿಗಳ ಕುಟುಂಬಸ್ಥರಿಗೆ ಮತ್ತ್ತು ಅವಲಂಬಿತರಿಗೆ ಜೀವನ ಭದ್ರತೆಗಾಗಿ ವಿಮಾ ಭದ್ರತೆಯನ್ನು ಹಾಗೂ ರಕ್ಷಣೆಯನ್ನು ನೀಡುವಂತೆ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್, ರಾಜ್ಯದ ಗೃಹ ಮಂತ್ರಿಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಯಿ, ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಉಮೇಶ್ ಕತ್ತಿ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಭರವಸೆಗಳ ಸಮಿತಿ ಅಧ್ಯಕ್ಷರಾದ ಕೆ. ರಘುಪತಿ ಭಟ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಟಿ ದೇವೇಗೌಡ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಮಾನ್ಯ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ಜಿ. ಜಗದೀಶ್ ಇವರಿಗೆ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ
ಬಿ. ಜಯಕರ ಶೆಟ್ಟಿ ಇಂದ್ರಾಳಿ ಮನವಿ ಸಲ್ಲಿಸಿರುತ್ತಾರೆ.