ಉಡುಪಿ: ತಪ್ಪು ಸಂದೇಶ 2ನೇ ಡೋಸ್’ಗಾಗಿ ಆಸ್ಪತ್ರೆ ಗಳಿಗೆ ಅಲೆದಾಡಿದ ಹಿರಿಯ ನಾಗರಿಕರು

ಉಡುಪಿ ಮೇ.20(ಉಡುಪಿ ಟೈಮ್ಸ್ ವರದಿ): ಸರಕಾರದಿಂದ ಬಂದ ತಪ್ಪು ಸಂದೇಶದಿಂದಾಗಿ 2 ನೇ ಡೋಸ್ ಕೋವಿಡ್ ಲಸಿಕೆ ಪಡೆಯಲು ಬಂದಿದ್ದ ಹಲವು ಮಂದಿ ಹಿರಿಯ ನಾಗರಿಕರು ಆಸ್ಪತ್ರೆಗಳಿಗೆ ಅಲೆದಾಡಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

 ಹೌದು…, ರಾಜ್ಯ ಸರಕಾರದ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಈ ಅವಾಂತರ ಸೃಷ್ಟಿಯಾಗಿತ್ತು. ಮೊದಲ ಡೋಸ್ ಪಡೆದವರ ಮೊಬೈಲ್ ಗೆ ಈ ರೀತಿ ಸಂದೇಶ ಬಂದಿತ್ತು. ಅದರಂತೆ  ಆತ್ಮೀಯ …… ರವರೇ ತಮ್ಮ ಕೋವಿಡ್ ಲಸಿಕೆಯ 2 ನೇ ಡೋಸ್ ನ್ನು , ದಿನಾಂಕ ಮೇ 19 ರಂದು ಬೆಳಿಗ್ಗೆ 10 ಗಂಟೆ ಯಿಂದ 12 ಗಂಟೆ ನಡುವೆ ಗಾಂಧಿ ಆಸ್ಪತ್ರೆಯಲ್ಲಿ ನಿಗದಿಪಡಿಸಲಾಗಿದೆ. ನೋಂದಣಿ ಸಮಯದಲ್ಲಿ ನೀಡಿರುವ ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವುದು ಕರ್ನಾಟಕ ಸರಕಾರ ಎಂಬ ಸಂದೇಶ ಜಿಲ್ಲೆಯ ಹಲವು ಮಂದಿ ಹಿರಿಯ ನಾಗರಿಕರ ಮೊಬೈಲ್ ಸಂಖ್ಯೆಗೆ ಬಂದಿತ್ತು.

ಸಂದೇಶವನ್ನು ಪಡೆದ ಅನೇಕ ಮಂದಿ ಹಿರಿಯ ನಾಗರಿಕರು ತಮಗೆ ಸೂಚಿಸಿದ ಆಸ್ಪತ್ರೆಗಳಿಗೆ ಲಸಿಕೆ ಪಡೆದುಕೊಳ್ಳಲು ತೆರಳಿದ್ದಾರೆ. ಈ ನಡುವೆ ಆಸ್ಪತ್ರೆಗಳಿಗೆ ಅನೇಕರು ಲಸಿಕೆ ಪಡೆಯಲು ಬಂದಿರುವುದನ್ನು ಗಮನಿಸಿದ ಆಸ್ಪತ್ರೆಯವರಿಗೆ ಅಚ್ಚರಿಯಾಗಿತ್ತು. ಯಾಕೆಂದರೆ ಸೂಚಿಸಿದ ದಿನಾಂಕ ದಂದು ಲಸಿಕೆ ನೀಡಲು ಯಾವುದೇ ರೀತಿಯ ಲಸಿಕೆ ಆಸ್ಪತ್ರೆಗಳಿಗೆ ಪೂರೈಕೆ ಆಗಿರಲಿಲ್ಲ. ಅಲ್ಲದೆ ಅನೇಕರು ಗ್ರಾಮೀಣ ಪ್ರದೇಶಗಳಿಂದಲೂ ಆಸ್ಪತ್ರೆಗೆ ಬಂದಿದ್ದು ಲಸಿಕೆ ಗಳಿಗಾಗಿ ಅಲೆದಾಟ ನಡೆದಿದ್ದರು ಆದರೂ ಲಸಿಕೆ ಪಡೆಯದೇ ಹಿಂತಿರುಗುವಂತಾಗಿತ್ತು.

ಈ ವೇಳೆ ಲಸಿಕೆ ಗಾಗಿ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ ಪ್ರೊ. ಮುರಳೀಧರ ಉಪಾಧ್ಯಾಯ ಅವರು ಹೀಗನ್ನುತ್ತಾರೆ, ಮಾ.31ರಂದು ಮೊದಲ ಡೋಸ್ ಪಡೆದ ನನಗೆ ಮತ್ತು ನನ್ನ ಪತ್ನಿಗೆ ಎರಡನೇ ಡೋಸ್ ಪಡೆಯುವ ಬಗ್ಗೆ ಮೊಬೈಲ್ ಸಂದೇಶ ಬಂದಿತ್ತು. ಅದರಂತೆ ನಾವು ರಿಕ್ಷಾದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದವು. ಆದರೆ ಆಸ್ಪತ್ರೆಯವರಿಂದ ನಮಗೆ ಯಾವುದೇ ಮಾಹಿತಿ ಇಲ್ಲ, ನಿಮ್ಮಂತೆ ಹಲವು ಮಂದಿ ಬಂದರು ಹೋಗಿದ್ದಾರೆ ಎಂಬ ಉತ್ತರ ಬಂತು. ಅದಕ್ಕೆ ನಾವು ಲಸಿಕೆ ಸಿಗುವ ಅಲ್ಲೇ ಹತ್ತಿರ ಸರಕಾರಿ ಆಸ್ಪತ್ರೆಗೆ ತೆರಳಿದವು. ಅಲ್ಲೂ ಕೂಡ ಇದೇ ಉತ್ತರ ದೊರೆಯಿತು ‘ನಮಗೆ ಬಂದ ಸಂದೇಶದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಹೆಸರು ಸ್ಪಷ್ಟವಾಗಿದೆ. ಆದರೂ ನಮಗೆ ಲಸಿಕೆ ಸಿಗಲಿಲ್ಲ. ನಮಗೆ ಎರಡನೇ ಡೋಸ್ ಮೇ ಮೊದಲ ವಾರದಲ್ಲಿ ಸಿಗಬೇಕಾಗಿತ್ತು. ಬೇರೆ ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಎರಡನೇ ಡೋಸ್ ನೀಡಲಾಗುತ್ತಿದೆ. ಬುದ್ದಿವಂತರ ಜಿಲ್ಲೆ ಎನಿಸಿರುವ ಉಡುಪಿಯಲ್ಲಿ ಈ ರೀತಿ ಅವ್ಯವಸ್ಥೆ ಯಾಕೆ. ಇದೊಂದು ರೀತಿಯಲ್ಲಿ ನಮ್ಮನ್ನು ಫೂಲ್ ಮಾಡಿದಂತೆ ಆಗಿದೆ. ಈ ಕೊರೋನಾ ಭೀತಿಯ ಮಧ್ಯೆಯೂ ನಾವು ಆಸ್ಪತ್ರೆಗಳಿಗೆ ಅಲೆದಾಡುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು  ಈ ಬಗ್ಗೆ ಉಡುಪಿಯ ಲಸಿಕಾ ನೋಡಲ್ ಅಧಿಕಾರಿ ಡಾ.ಎಂ.ಜಿ.ರಾಮ ‘ಕೆಲವರ ಮೊಬೈಲ್‌ಗೆ ಲಸಿಕೆ ಪಡೆಯುವ ಬಗ್ಗೆ ಸಂದೇಶ ಹೋಗಿದೆ. ಅದು ಕರ್ನಾಟಕ ಸರಕಾರದಿಂದ ಬಂದ ಸಂದೇಶವೇ ಹೊರತು ನಮ್ಮ ಇಲಾಖೆಯಿಂದ ಕಳುಹಿಸಿದಲ್ಲ. ರಾಜ್ಯಮಟ್ಟದಲ್ಲಿ ಸಾಫ್ಟ್‌ವೇರ್‌ ಸಮಸ್ಯೆಯಿಂದ ಈ ರೀತಿ ಸಂದೇಶ ಎಲ್ಲ ಜಿಲ್ಲೆಗಳಿಗೂ ಹೋಗಿದೆ. ಆದರೆ ಅದು ತಪ್ಪು ಸಂದೇಶ ಆಗಿದೆ. ನಾವು ನಗರ ಪ್ರದೇಶದಲ್ಲಿ ಮಾತ್ರ ಸಂದೇಶ ಕಳುಹಿಸುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರೇ ಲಸಿಕೆ ಪಡೆಯುವವರಿಗೆ ಮಾಹಿತಿ ನೀಡುತ್ತಾರೆ ಎಂದು ಜಿಲ್ಲೆಯಲ್ಲಿ ಉಂಟಾಗಿದ್ದ ಲಸಿಕಾ ಲಭ್ಯತೆ ಕುರಿತು ಉಂಟಾಗಿದ್ದ ಗೊಂದಲಕ್ಕೆ ಸ್ಪಷ್ಟನೆ ನೀಡಿದರು. 

ಇದರೊಂದಿಗೆ ಈ ಗೊಂದಲಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ ಮೊದಲ ಡೋಸ್ ಖಾಸಗಿ ಆಸ್ಪತ್ರೆಯಲ್ಲಿ ಪಡೆದು ಕೊಂಡವರು ಎರಡನೇ ಡೋಸ್ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ‘ಮಣಿಪಾಲ ಕೆಎಂಸಿಯವರು ತಾವೇ ಲಸಿಕೆಯನ್ನು ಖರೀದಿಸಿ, ಅವಧಿ ಮೀರಿದ ತಮ್ಮ ಸಿಬ್ಬಂದಿಗೆ ಎರಡು ಮೂರು ದಿನಗಳಲ್ಲಿ ನೀಡಲಿದ್ದಾರೆ. ಉಳಿದ ಖಾಸಗಿ ಆಸ್ಪತ್ರೆಯವರು ಖರೀದಿಸಿ ತರುವವರೆಗೆ ಅಲ್ಲಿ ಮೊದಲ ಡೋಸ್ ಪಡೆದವರಿಗೆ ಇಲಾಖೆಯಿಂದ ಎರಡನೇ ಡೋಸ್ ನೀಡಲಾಗುವುದು. ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಡೋಸ್ ಪಡೆದುಕೊಂಡವರಿಗೂ ಎರಡನೇ ಡೋಸ್ ಪಡೆಯಲು ನಾವು ಮೊಬೈಲ್ ಸಂದೇಶ ಕಳುಹಿಸುತ್ತೇವೆ. ಯಾರು ಕೂಡ ಗೊಂದಲಕ್ಕೆ ಒಳಗಾಗುವುದು ಬೇಡ’ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!