ಸಂಸದೆ ಶೋಭಾ ಹೇಳಿಕೆ ಬಾಲಿಶವಾಗಿದ್ದು-ಕೆಥೊಲಿಕ್ ಸಭಾ ಉಡುಪಿ
ಉಡುಪಿ: ಚರ್ಚುಗಳಲ್ಲಿ ಕೋವಿಡ್ ಲಸಿಕೆ ಪಡೆಯದಂತೆ ಜನರಿಗೆ ದಾರಿ ತಪ್ಪಿಸಲಾಗುತ್ತಿದೆ ಎಂಬ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಬಾಲಿಶವಾಗಿದ್ದು ಇದನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ತೀವ್ರವಾಗಿ ಖಂಡಿಸುತ್ತದೆ.
ಈಗಾಗಲೇ ಉಡುಪಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಕೆಥೊಲಿಕ್ ಸಭಾ ನೇತೃತ್ವದಲ್ಲಿ ಕೋವಿಡ್ ವಾರಿಯರ್ಸ್ ಗಳ ಮೂಲಕ ಮೌನವಾಗಿ ತನ್ನ ಸೇವೆಯನ್ನು ಕ್ರೈಸ್ತ ಸಮುದಾಯ ಮಾಡಿಕೊಂಡು ಬಂದಿದೆ. ಜಾತಿ ಮತ ಭೇಧವಿಲ್ಲದೆ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯುವಂತೆ ಜನಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸ್ವತಃ ಸಂಘಟನೆಯ ವಾರಿಯರ್ ಗಳೇ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು, ಪ್ರಾರ್ಥನಾಲಯಗಳನ್ನು, ಸಭಾಂಗಣಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ರೂಪಿಸಿ ಸರಕಾರಗಳಿಗೆ ಬಿಟ್ಟುಕೊಡಲಾಗಿದೆ.
ಆರೋಗ್ಯದ ಕುರಿತು ಮಾಡುವ ಸೇವೆಯನ್ನು ದೇವರ ಸೇವೆ ಎಂದು ಕ್ರೈಸ್ತ ಸಮುದಾಯ ಪರಿಗಣಿಸಿದ್ದು ಇದರಲ್ಲಿ ಪ್ರತಿಬಾರಿಯೂ ಮುಂಚೂಣಿಯಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದೆ ಎನ್ನುವುದನ್ನು ಸಂಸದರು ಮರೆಯಬಾರದು. ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಇತರ ಕ್ರೈಸ್ತ ಮುಖಂಡರುಗಳು ತಾವೇ ಮುಂದೆ ನಿಂತು ವ್ಯಾಕ್ಸಿನ್ ಪಡೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಚರ್ಚುಗಳಲ್ಲಿ, ವ್ಯಾಕ್ಸಿನ್ ಹಾಕಿಸಬಾರದು ಎಂದು ಪ್ರಚುರಪಡಿಸಲಾಗುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಸುಳ್ಳು ಆರೋಪ ಸರಿಯಲ್ಲ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಕೋವಿಡ್ ಸಂದರ್ಭರ್ಭದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಜಾತಿ ಮತ ಭೇಧವಿಲ್ಲದೆ ಕಿಟ್ ಗಳನ್ನು ಪೊರೈಸುವ ಮೂಲಕ ಕ್ರೈಸ್ತ ಸಮುದಾಯ ತನ್ನ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುತ್ತಿದೆ. ಇದ್ಯಾವುದನ್ನೂ ಕೂಡ ಪ್ರಚಾರದ ಉದ್ದೇಶದಿಂದ ಮಾಡದೆ ಸೇವೆಯಾಗಿ ಪ್ರತಿ ಚರ್ಚ್ ವ್ಯಾಪ್ತಿಯಲ್ಲಿ ಮೌನವಾಗಿ ಮಾಡುತ್ತಿದ್ದಾರೆ. ಈಗಾಗಲೇ ಸರಕಾರದ ನಿಯಮಾವಳಿಗಳನ್ನು ಚಾಚು ತಪ್ಪದೆ ಪಾಲಿಸುತ್ತಿರುವ ಕ್ರೈಸ್ತ ಸಮುದಾಯ, ತಮ್ಮ ಎಲ್ಲಾ ಚರ್ಚುಗಳನ್ನು ಮುಚ್ಚಿದ್ದು ಈ ನಡುವೆ ಹೇಗೆ ಚರ್ಚುಗಳಲ್ಲಿ ಲಸಿಕೆ ಕುರಿತು ತಪ್ಪು ಮಾಹಿತಿ ಬಿತ್ತಿರಿಸದ್ದಾರೆ ಎನ್ನುವುದು ಸಂಸದರು ಬಹಿರಂಗಪಡಿಸಿದರೆ ಉತ್ತಮ. ಇಲ್ಲವಾದಲ್ಲಿ ಕೇವಲ ಸಂಸದರು ತಮ್ಮ ಪ್ರಚಾರದ ದೃಷ್ಟಿಯಿಂದ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವುದನ್ನು ದಯವಿಟ್ಟು ನಿಲ್ಲಿಸಬೇಕು ಎಂದು ಈ ಮೂಲಕ ವಿನಂತಿಸುತ್ತೇವೆ.
ಸಂಸದರು ಒಂದು ಸಮುದಾಯವನ್ನು ಗುರಿ ಮಾಡುವ ಬದಲು ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಲಭಿಸುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ ನಮ್ಮ ಕಾರ್ಯಕರ್ತರು ಮಾಡುತ್ತಿರುವ ಸೇವೆ ಸೂಕ್ತ ಪ್ರತಿಫಲ ಸಿಕ್ಕಂತಾಗುತ್ತದೆ ಅಲ್ಲದೆ ಜನರು ಕೇವಲ ಸರತಿ ಸಾಲಿನಲ್ಲಿ ನಿಂತು ಲಸಿಕೆ ಇಲ್ಲದೆ ವಾಪಾಸಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸಂಸದರ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ರೀತಿಯ ಸಹಕಾರ ನೀಡಲು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಧರ್ಮಪ್ರಾಂತ್ಯದ ಪರವಾಗಿ ಸಿದ್ದವಿದೆ ಎಂದು ಈ ಮೂಲಕ ತಿಳಿಸಬಯಸುತ್ತೇವೆ.
Great…. We have such MP’s… Shame on us.