ಪ್ಯಾಕೇಜ್’ನಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಂಚನೆ-ಟೀಚರ್ಸ್ಅ ಸೋಸಿಯೇಷನ್
ಉಡುಪಿ: ರಾಜ್ಯ ಸರ್ಕಾರ ಕೋವಿಡ್’ನಲ್ಲಿ ಸಂಕಷ್ಟದಲ್ಲಿರುವವರಿಗೆ 1250 ಕೋಟಿ ರೂಪಾಯಿಯ ಪರಿಹಾರ ಘೋಷಿಸಿದ್ದು ಇದರಿಂದ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಹೊರಗಿಟ್ಟಿರುವುದನ್ನು ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಉಡುಪಿ ಜಿಲ್ಲಾಧ್ಯಕ್ಷರಾದ ಅಸ್ಲಮ್ ಹೈಕಾಡಿ ಖಂಡಿಸಿದ್ದಾರೆ.
ಈಗಾಗಲೇ ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರು ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದು ಅವರಿಗೆ ಸೂಕ್ತ ಅರ್ಥಿಕ ನೆರವು ನೀಡಬೇಕಾಗಿದ್ದ ಸರಕಾರ ಇದೀಗ ಘೋಷಿಸಿದ ಅರ್ಥಿಕ ಪ್ಯಾಕೇಜ್ ನಿಂದ ಹೊರಗಿಟ್ಟಿದ್ದು ದುರದೃಷ್ಟಕರವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳು ಕೂಡ ಪೋಷಕರಿಂದ ಶುಲ್ಕ ಸಂಗ್ರಹಿಸದೆ ನಷ್ಟದಲ್ಲಿದೆ. ಅದರಲ್ಲೂ ಸೇವಾ ಮನೋಭಾವದಿಂದ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ನಡೆಸುತ್ತಿರುವ ಶಾಲಾ-ಕಾಲೇಜುಗಳು ತೀವ್ರ ನಷ್ಟದಲ್ಲಿದೆ. ಈ ಸಂದರ್ಭದಲ್ಲಿ ಶಿಕ್ಷಕರಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ. ಕೆಲವರಿಗೆ ಅರ್ಧ ವೇತನ ನೀಡಿದರೆ ಇನ್ನು ಕೆಲವರಿಗೆ ವೇತನ ಸಿಗುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚಬೇಕಾಗಿದ್ದ ಸರಕಾರ ಮೌನವಾಗಿರುವುದು ಖೇದಕರ ಎಂದಿದ್ದಾರೆ. ಸರಕಾರ ಈ ಕುರಿತು ಗಮನವಹಿಸಿ ಕೂಡಲೇ ಶಿಕ್ಷಕ ಸಮುದಾಯಕ್ಕೆ ನೆರವಿನ ಹಸ್ತ ಚಾಚಬೇಕೆಂದು ಅಸ್ಲಮ್ ಹೈಕಾಡಿ ಆಗ್ರಹಿಸಿದ್ದಾರೆ.