ಹೊರ ರಾಜ್ಯ, ವಿದೇಶಗಳಿಂದ ಬರುವವರ ಮೇಲೆ ಮತ್ತಷ್ಟು ನಿರ್ಬಂಧ ಹೇರಲು ಚಿಂತನೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಶತಕದ ಗಡಿ ದಾಟಿ ದಾಖಲೆ ಮಾಡಿದ್ದ ವೈರಸ್ ಮಂಗಳವಾರ 149 ಸಂಖ್ಯೆ ಮುಟ್ಟುವ ಮೂಲಕ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಹೊರ ರಾಜ್ಯ, ಹೊರದೇಶದಿಂದ ಆಗಮನ ಹೆಚ್ಚಳ ಹಾಗೂ ಸೋಂಕು ಪರೀಕ್ಷಾ ಪ್ರಮಾಣ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಇನ್ನು ಮುಂದೆ ಇದೇ ರೀತಿ ದಿನಕ್ಕೆ 100, 200ರ ರೀತಿಯಲ್ಲಿ ಸೋಂಕು ಪ್ರಕರಣಗಳು ಹೆಚ್ಚುವ ಭೀತಿ ಸೃಷ್ಟಿಯಾಗಿದೆ.
ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಇದೀಗ ಮತ್ತಷ್ಟು ಹೊರ ರಾಜ್ಯ ಹಾಗೂ ಹೊರ ದೇಶಗಳ ಪ್ರಯಾಣದ ಮೇಲೆ ಮತ್ತಷ್ಟು ನಿರ್ಬಂಧ ಹೇರಲು ಚಿಂತನೆ ನಡೆಸುತ್ತಿದೆ ಎಂದು ತಿಳಿದಬಂದಿದೆ.
ಕೊರೋನಾ ವೈರಸ್ ಸೋಂಕು ನಿಗ್ರಹಿಸುವ ನಿಟ್ಟಿನಲ್ಲಿ ಮೇ 18 ರಂದು ರಾಜ್ಯ ಸರ್ಕಾರ ಮಹಾರಾಷ್ಟ್ರ, ಗುಜರಾತ್, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಜನತೆ ರಾಜ್ಯ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು.
ಈ ಬೆಳವಣಿಗೆ ನಡುವಲ್ಲೇ ಸೋಂಕಿತರ ಸಂಖ್ಯೆ ಎಂದಿನಂತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೊರ ರಾಜ್ಯಗಳ ಪ್ರಯಾಣದ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ 35,058 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ತಮಿಳುನಾಡು 11,760, ಗುಜರಾತ್ 11,745 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅತೀ ಹೆಚ್ಚು ಸೋಂಕಿತರನ್ನು ಒಳಗೊಂಡಿರುವ ರಾಜ್ಯಗಳ ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. ಇತರೆ ರಾಜ್ಯಗಳಿಂದ ಹಿಂತಿರುವವರಿಂದಲೇ ಅತೀ ಹೆಚ್ಚು ಸೋಂಕು ಪತ್ತೆಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತಷ್ಟು ರಾಜ್ಯಗಳ ಪ್ರಯಾಣದ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ತಿಳಿಸಿದ್ದಾರೆ