ರಾಜ್ಯ ಸರ್ಕಾರ 1,250 ಕೋಟಿ ರೂ ಪರಿಹಾರ ಪ್ಯಾಕೇಜ್ ಘೋಷಣೆ!- ಯಾರ್ಯಾರಿಗೆ, ಎಷ್ಟೆಷ್ಟು? ಇಲ್ಲಿದೆ ಮಾಹಿತಿ…
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳ ಕಾರ್ಮಿಕರಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ 1,250 ಕೋಟಿ ರೂ.ಗೂ ಅಧಿಕ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಸಚಿವ ಸಂಪುಟ ಸಭೆ ನಡೆಸಿ ಚರ್ಚೆ ಮಾಡಿ ತೆಗೆದುಕೊಂಡ ತೀರ್ಮಾನಗಳು, ಪರಿಹಾರಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರಕಟಿಸಿದರು.
ಮುಖ್ಯಮಂತ್ರಿಗಳು ಪ್ರಕಟಿಸಿದ ಪರಿಹಾರ ಪ್ಯಾಕೇಜ್ ಯಾರಿಗೆ, ಎಷ್ಟೆಷ್ಟು?: ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯಧನ, ಹಣ್ಣು, ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ 10 ಸಾವಿರ, ಹಣ್ಣು ತರಕಾರಿ ಬೆಳೆಗೆ ಒಂದು ಹೆಕ್ಟೇರ್ ಗೆ ಕನಿಷ್ಠ 10 ಸಾವಿರ ಸಹಾಯಧನ, ಆಟೋ, ಕ್ಯಾಬ್ ಚಾಲಕ 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ 2 ಸಾವಿರ, ರಸ್ತೆಬದಿ ವ್ಯಾಪಾರಿಗಳಿಗೆ 2 ಸಾವಿರ, ಕಲಾವಿದರು, ಕಲಾ ತಂಡಕ್ಕೆ 3 ಸಾವಿರ ಹಾಗೂ ಸಾಲ ಮರು ಪಾವತಿಗೆ 3 ತಿಂಗಳ ಅವಕಾಶ ಇದ್ದು, 3 ತಿಂಗಳ ಬಡ್ಡಿ ಸರ್ಕಾರವೇ ಭರಿಸಲಿದೆ ಎಂದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 5 ಕೆಜಿ ಅಕ್ಕಿ ನೀಡಲಾಗುವುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ಕೊಡಲಾಗುತ್ತದೆ. ಅಲ್ಲದೆ ಮೇ, ಜೂನ್ ರೇಷನ್ ಕೊಡಲಾಗುತ್ತೆ. ಪ್ಯಾಕೇಜ್ ನಲ್ಲಿ ಕಳೆದ ವರ್ಷದಂತೆ ಲೋಪ ಆಗದಂತೆ ಕ್ರಮವಹಿಸಲಾಗುತ್ತೆ. ಲಾಕ್ ಡೌನ್ ವಿಸ್ತರಣೆ ಬಗ್ಗೆ 23 ರಂದು ತೀರ್ಮಾನ ಮಾಡ್ತೀವಿ ಎಂದು ಸಿಎಂ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ಈವರೆಗೆ 2.6ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಇದಕ್ಕಾಗಿ 956 ಕೋಟಿ ಖರ್ಚು ಮಾಡಲಾಗುತ್ತದೆ. ಪ್ರತಿ ಪಂಚಾಯತಿಗೆ ಕೋವಿಡ್ ನಿರ್ವಹಣೆಗೆ 50 ಸಾವಿರ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಲೈನ್ ಮ್ಯಾನ್, ಗ್ಯಾಸ್ ತಲುಪಿಸೋರು, ಶಿಕ್ಷಕರು ಫ್ರಂಟ್ ಲೈನ್ ವರ್ಕರ್ಸ್ ಅಂತ ಸಿಎಂ ಘೋಷಣೆ ಮಾಡಿದರು.