ಕಾರ್ಕಳ: ಅಕ್ರಮ ಮದ್ಯ ಮಾರಾಟ -ಓರ್ವನ ಬಂಧನ
ಕಾರ್ಕಳ ಮೇ.19(ಉಡುಪಿ ಟೈಮ್ಸ್ ವರದಿ): ಲಾಕ್ ಡೌನ್ ಹೊರತಾಗಿಯೂ ಸಾರ್ವಜನಿಕರಿಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣ ಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.
ಮೈಕಲ್ ಕೊರೆಯ(58) ಪೊಲೀಸರು ವಶಕ್ಕೆ ಪಡೆದ ಆರೋಪಿ. ಮೇ.18 ರಂದು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಧು ಬಿಇ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ, ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಾರೋಲ್ ಗುಡ್ಡೆ ಎಂಬಲ್ಲಿ ಮೈಕಲ್ ಕೊರೆಯ ಎಂಬವರು ತನ್ನ ಸ್ವಂತ ಲಾಭಕ್ಕೋಸ್ಕರ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದುದು ಕಂಡು ಬಂದಿದೆ.
ಈ ವೇಳೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಮೈಕಲ್ ಕೊರೆಯ ಎಂಬಾತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ180ಎಮ್‌ಎಲ್‌ನ ಒಟ್ಟು17ಮದ್ಯ ತುಂಬಿದ ಸ್ಯಾಚೆಟ್‌ಗಳನ್ನು ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹವಾದ 3,200ರೂ. ನಗದು ಮತ್ತು ಪ್ಲಾಸ್ಟಿಕ್ ಕೈ ಚೀಲವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.