ಟಿಸಿಎಸ್ ಸಾರಿಗೆ ಸಂಸ್ಥೆಗೆ ಬೀಗ ಮುದ್ರೆ-ಇನ್ನೂರಕ್ಕೂ ಹೆಚ್ಚು ಕಾರ್ಮಿಕರು ಬೀದಿಪಾಲು
ಚಿಕ್ಕಮಗಳೂರು ಮೇ.18: ಕಾಫಿ ನಾಡಿನಲ್ಲಿ ಕಳೆದ ಕೆಲವು ದಶಕಗಳಿಂದ ಸಾರಿಗೆ ಸಂಪರ್ಕದ ಪ್ರಮುಖ ಅಂಗವಾಗಿದ್ದ ಸಹಕಾರ ಸಾರಿಗೆಗೆ ಇಂದು ಬೀಗ ಮುದ್ರೆ ಬಿದ್ದಿದೆ.
1990ರಲ್ಲಿದ್ದ ಶಂಕರ್ ಟ್ರಾನ್ಸ್‍ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಬಾಂಧವ್ಯ ಬೆಸೆದಿತ್ತು. ಆದರಿಂದು ಅವನತಿಯ ಅಂಚಿನಲ್ಲಿದೆ. ತಿಂಗಳಿಗೆ ಡೀಸೆಲ್‍ನಿಂದ 24 ಲಕ್ಷ ರೂ ನಷ್ಟವಾದ್ರೆ, ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್‍ನ ಹೊರೆ. ಹಾಗಾಗಿ, ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನ ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನ ಎದುರುನೋಡ್ತಿದೆ. ಡೀಸೆಲ್ ದರ ಹೆಚ್ಚಾದಾಗಲೂ ಟಿಕೆಟ್ ದರ ಏರಿಸಿಲ್ಲ. ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿತ್ತು
72 ಬಸ್ ಗಳು, 200 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ಟಿಸಿಎಸ್ ಸಂಸ್ಥೆ ಕಳೆದ ಒಂದೂವರೆ ವರ್ಷದ ಹಿಂದೆ ನಷ್ಟದಿಂದ ಬಸ್ ಸಂಚಾರ ನಿಲ್ಲಿಸಿತ್ತು. ಅಲ್ಲದೆ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಲಿ. ನಿಂದ ಸಹಕಾರ ಸಂಘ 1,10,00,000 ಸಾಲ ಪಡೆದಿತ್ತು. ಈ ಸಾಲ ಬಡ್ಡಿ ಸೇರಿ ಸಂಸ್ಥೆ 1,31,00,000 ಸಾಲ ಮರು ಪಾವತಿಸ ಬೇಕಾಗಿತ್ತು. ಆದರೆ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಇಂದು ಸಹಕಾರ ಸಾರಿಗೆ ಬಸ್ ಗಳನ್ನು ಜಪ್ತಿ ಮಾಡಲಾಗಿದೆ.
ಒಂದು ವರ್ಷದಿಂದ ಸಾಲ ಕಟ್ಟದ ಹಿನ್ನೆಲೆಯಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಜಿಲ್ಲಾಧಿಕಾರಿ ಮೊರೆ ಹೋಗಿತ್ತು. ಇದೀಗ ಜಿಲ್ಲಾಧಿಕಾರಿ ರಮೇಶ್ ಅವರ ಆದೇಶದ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಪ್ತಿ ಮಾಡಲಾಗಿದೆ. ಈ ಮೂಲಕ ಚಿಕ್ಕಮಗಳೂರಿನ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಇತಿಹಾಸದ ಪುಟ ಸೇರಿದೆ.