ಕೊರೋನಾ ವೈರಸ್ 2ನೇ ಅಲೆ- 270 ವೈದ್ಯರ ಸಾವು: ಏಮ್ಸ್
ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ದೇಶಾದ್ಯಂತ ಸುಮಾರು 270 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾಹಿತಿ ನೀಡಿದೆ.
ಇಂದು ಬೆಳಗ್ಗೆಯಷ್ಟೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದರು. ಡಾ. ಅಗರ್‌ವಾಲ್ (62) ಈ ಮೊದಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರನ್ನು ಕಳೆದ ವಾರ ಏಮ್ಸ್‌ಗೆ ದಾಖಲಿಸಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೇ ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವೈದ್ಯರ ಕುರಿತ ದತ್ತಾಂಶಗಳನ್ನು ಏಮ್ಸ್ ನೀಡಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಸೇರಿದಂತೆ ದೇಶದಲ್ಲಿ 2ನೇ ಅಲೆ ಸಂದರ್ಭದಲ್ಲಿ 270 ಮಂದಿ ವೈದ್ಯರು ಸಾವನ್ನಪ್ಪಿದ್ದು, ಈ ಪೈಕಿ ಬಿಹಾರದಲ್ಲಿ ಅತ್ಯಧಿಕ ಅಂದರೆ 78 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಉಳಿಂದಂತೆ ಉತ್ತರ ಪ್ರದೇಶದಲ್ಲಿ 37 ಮಂದಿ, ದೆಹಲಿ 29 ಮಂದಿ ಮತ್ತು ಆಂಧ್ರ ಪ್ರದೇಶದಲ್ಲಿ 22 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ,
ಇನ್ನು ಕಳೆದ ಮೊದಲ ಅಲೆಯಲ್ಲಿ ದೇಶದಲ್ಲಿ 748 ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಆದರೆ 2ನೇ ಅಲೆ ಆರಂಭವಾಗಿ 2 ತಿಂಗಳಲ್ಲಿಯೇ 270 ಮಂದಿ ವೈದ್ಯರು ಜೀವಕಳೆದುಕೊಂಡಿದ್ದಾರೆ. ಕೊರೋನಾ ಸೋಂಕಿನ 2ನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿದ್ದು, ಪ್ರಮುಖವಾಗಿ ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಮಂದಿ ಸಿಬ್ಬಂದಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಐಎಂ ಅಧ್ಯಕ್ಷ ಡಾ.ಜೆಎ ಜಯಲಾಲ್ ಹೇಳಿದ್ದಾರೆ.