ಲಾಕ್‌ಡೌನ್ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದೆ- ಕಪ್ಪು ಶಿಲೀಂಧ್ರ ನಿಭಾಯಿಸಲು ಸಿದ್ಧ: ಸಿಎಂ ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ, ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಲಾಕ್‌ಡೌನ್ ವಿಸ್ತರಣೆ ಮತ್ತು ಪ್ಯಾಕೇಜ್ ಘೋಷಿಸುವ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, “ನಾನು ಅದನ್ನು ಚರ್ಚಿಸುತ್ತಿದ್ದೇನೆ, ನಿಮಗೆ ತಿಳಿಸುತ್ತೇನೆ. ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ” ಎಂದರು.
ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಮೇ 24ಕ್ಕೆ ಅಂತ್ಯವಾಗಲಿದ್ದು, ಸಚಿವರು ಸೇರಿದಂತೆ ಹಲವು ನಾಯಕರು ಲಾಕ್ ಡೌನ್ ವಿಸ್ತರಿಸುವ ಒಲವು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರವು ಆರಂಭದಲ್ಲಿ ಏಪ್ರಿಲ್ 27 ರಿಂದ 14 ದಿನ “ಲಾಕ್ ಡೌನ್” ಘೋಷಿಸಿತ್ತು, ಆದರೆ ತರುವಾಯ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮೇ 10 ರಿಂದ ಮೇ 24 ರವರೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಿತು.
ಲಾಕ್ ಡೌನ್ ವಿಸ್ತರಣೆ ಪರ ಬ್ಯಾಟಿಂಗ್ ಮಾಡುತ್ತಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ, ಬೆಂಗಳೂರಿನಲ್ಲಿ ದೈನಂದಿನ ಹೊಸ ಪ್ರಕರಣಗಳು 22,000 ದಿಂದ 8,000 ಕ್ಕೆ ಇಳಿದಿರುವುದರಿಂದ ಲಾಕ್‌ಡೌನ್ ಉಪಯುಕ್ತವಾಗಿದೆ ಮತ್ತು ಲಾಕ್ ವಿಸ್ತರಿಸಿದರೆ ಒಳ್ಳೆಯದು ಎಂದರು.
ಇನ್ನು ಕಪ್ಪು ಶಿಲೀಂಧ್ರ ಸೋಂಕಿನ ಬಗ್ಗೆ ತಜ್ಞರೊಂದಿಗಿನ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್ ಅವರು, ಕಪ್ಪು ಶಿಲೀಂಧ್ರ ನಿಭಾಯಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ, ನಿನ್ನೆ ತನಕ ರಾಜ್ಯದಲ್ಲಿ 97 ಜನ ಕಪ್ಪು ಶಿಲೀಂಧ್ರ ಕಾಯಿಲೆಗೆ ತುತ್ತಾಗಿದ್ದಾರೆ ಎಂದರು.
ಆದಾಗ್ಯೂ, ಇದು ಕೊರೋನಾ ವೈರಸ್ ನಂತೆ ಬೇರೆಯವರಿಗೆ ಹರಡದ ಕಾರಣ ಭಯಪಡಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದರು.