ಕಾಪು: ಮೊಬೈಲ್ ಗೇಮ್ ಆಡದಂತೆ ಹೆತ್ತವರ ಬುದ್ದಿಮಾತಿಗೆ ನೊಂದು ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ
ಕಾಪು, ಮೇ 17 : ಮೊಬೈಲ್ ಗೇಮ್ ಅತಿಯಾಗಿ ಆಡದಂತೆ ತಾಯಿಯ ಬುದ್ದಿಮಾತಿಗೆ ನೊಂದು 16ರ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.15ರ ರಾತ್ರಿ ಇಲ್ಲಿನ ಮಣಿಪುರ ಗ್ರಾಮ ಕೋಟೆ ಬಳಿ ನಡೆದಿದೆ.
ಮೃತ ಬಾಲಕಿಯನ್ನು ಶಾಬನ್ ಹಾಗೂ ಜುಬೇದಾ ಅವರ ಪುತ್ರಿ ಸುಹೇಬತ್ ಅಸ್ಲಮೀಯಾ(16) ಎಂದು ಗುರುತಿಸಲಾಗಿದೆ. ಮೇ 15 ರಂದು ರಾತ್ರಿ 8.00 ಗಂಟೆ ವೇಳೆಗೆ ತಾಯಿಯು ಮೊಬೈಲ್ ನಲ್ಲಿ ಆಟ ಆಡದಂತೆ ಸುಹೇಬತ್ ಅಸ್ಲಮೀಯಾ ಬುದ್ದಿ ಹೇಳಿ ಮೊಬೈಲ್‌ನ್ನು ತೆಗೆದುಕೊಂಡಿದ್ದರು.
ಸ್ವಲ್ಪ ಸಮಯದ ಬಳಿಕ ಮಗಳು ಮನೆಯಲ್ಲಿರದಿರುವುದನ್ನು ಕಂಡು ಗಾಬರಿಗೊಂಡ ಹೆತ್ತವರು ಹುಡುಕಲಾರಂಭಿಸಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸರ್ಕಾರಿ ಬಾವಿ ಹತ್ತಿರ ಜನ ಸೇರಿದ್ದನ್ನು ಗಮನಿಸಿ ಹೋಗಿದ್ದಾರೆ. ಈ ವೇಳೆ ಮಗಳು ಬಾವಿಯ ನೀರಿನಲ್ಲಿ ಮುಳುಗುತ್ತಿರುವುದನ್ನು ತಿಳಿದು ಗಾಬರಿಯಾಗಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬಂದು ಬಾಲಕಿಯನ್ನು ಮೇಲಕ್ಕೆತ್ತಿದ್ದರೂ ಅದಾಗಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.