ಸರ್ಕಾರ ಕೊರೋನಾದಿಂದ ಮೃತಪಟ್ಟವರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಪರೀಕ್ಷೆ ಮತ್ತು ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಪರೀಕ್ಷೆ ಪ್ರಮಾಣವನ್ನು ಕೂಡಲೇ ಹೆಚ್ವಿಸಿ ಕೋವಿಡ್ ನಿಂದಾದ ಮರಣಗಳನ್ನು ನಿಖರವಾಗಿ ದಾಖಲಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ತಜ್ಞರ ಪ್ರಕಾರ ವೈರಸ್ಸಿನ ಅಲೆ ಕಡಿಮೆಯಾಗುವುದೆಂದರೆ ಪರೀಕ್ಷೆಗಳನ್ನು ನಡೆಸಿದಾಗ  ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾಗಬೇಕು.ವಾಸ್ತವದಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತಿದೆ ಎಂದಿದ್ದಾರೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮುಂತಾದ ಜಿಲ್ಲೆಗಳ ಪಾಸಿಟಿವಿಟಿ ದರ ಶೇ. 50 ಕ್ಕಿಂತ ಹೆಚ್ಚಿಗೆ ಇದೆ. ಇನ್ನುಳಿದ ಜಿಲ್ಲೆಗಳಲ್ಲೂ ಪಾಸಿಟಿವಿಟಿ ದರ ಶೇ. 35ರ ಆಸುಪಾಸಿನಲ್ಲೇ ಇದೆ. ಆದರೆ, ರಾಜ್ಯ ಸರ್ಕಾರ ಸೋಂಕಿತರ ಪ್ರಮಾಣ  ಇಳಿಮುಖವಾಗಿದೆಯೆಂದು ತೋರಿಸಲು ಸೋಂಕು ಪರೀಕ್ಷೆಯನ್ನೇ ಕಡಿಮೆ ಮಾಡಿದೆ. ಇದು ನಾಡಿನ ಜನತೆಗೆ ಎಸಗುತ್ತಿರುವ ದ್ರೋಹವಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ, ಜನರನ್ನು ಕತ್ತಲಲ್ಲಿಟ್ಟು ಕೊರೊನಾ ನಿಯಂತ್ರಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇಂದಿನಿಂದಲೇ ಕೊರೊನಾ ಸೋಂಕು ಪರೀಕ್ಷೆಯನ್ನು ಹೆಚ್ಚಿಸಬೇಕು, ಮಕ್ಕಳಿಗೂ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಕೊರೊನಾ ಮರಣಗಳನ್ನು ವಸ್ತುನಿಷ್ಠವಾಗಿ ದಾಖಲಿಸಿ, ಪ್ರತಿ ತಿಂಗಳು ಸಾವಿನ ಪ್ರಮಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!