ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿ ವಿಸ್ತರಣೆ
ಬೆಂಗಳೂರು ಮೇ.16: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣ ಗೊಳ್ಳುತ್ತಾ ಇದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಂಕಷ್ಟದ ಈ ಅವಧಿಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿಯನ್ನು ವಿಸ್ತರಿಸಿದೆ.
ಈ ನಿಟ್ಟಿನಲ್ಲಿ ಹುಂಡೈ ಮೋಟರ್ ಇಂಡಿಯಾ ಕಂಪೆನಿಯ ಲಾಕ್‌ಡೌನ್ ಇರುವ ನಗರಗಳು ಮತ್ತು ರಾಜ್ಯಗಳಲ್ಲಿನ ಗ್ರಾಹಕರಿಗೆ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ರೆನೊ ಮತ್ತು ಎಂಜಿ ಮೋಟರ್ ಇಂಡಿಯಾ ಕಂಪೆನಿಗಳು ಏಪ್ರಿಲ್ 1ರಿಂದ ಮೇ 31ರವರೆಗಿನ ಅವಧಿಯಲ್ಲಿ ಮುಗಿಯಲಿರುವ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿವೆ.
ಟೊಯೋಟ ಕಿರ್ಲೋಸ್ಕರ್ ಮೋಟರ್(ಟಿಕೆಎಂ)ಕಂಪೆನಿಯು ಕೋವಿಡ್–19 ನಿಯಂತ್ರಿಸಲು ನಿರ್ಬಂಧ ವಿಧಿಸಿರುವ ರಾಜ್ಯಗಳಲ್ಲಿ ವಾಹನದ ವಾರಂಟಿ ಮತ್ತು ವಿಸ್ತರಿತ ವಾರಂಟಿ ಅವಧಿಯನ್ನು ಒಂದು ತಿಂಗಳವರೆಗೆ ಹೆಚ್ಚಿಸಿರುವುದಾಗಿ ಹೇಳಿದೆ. ಮಾರುತಿಸುಜುಕಿ ಇಂಡಿಯಾ ಕಂಪೆನಿಯ ತನ್ನ ಉಚಿತ ಸೇವೆಗಳು ಮತ್ತು ವಾರಂಟಿ ಅವಧಿಯನ್ನು ಜೂನ್ 30ರವರೆಗೂ ವಿಸ್ತರಿಸಿರುವುದಾಗಿತಿಳಿಸಿದೆ. 2021ರ ಮಾರ್ಚ್ 15ರಿಂದ ಮೇ 31ರ ಅವಧಿಯ ಒಳಗಡೆ ಉಚಿತ ಸೇವೆ ಮತ್ತು ವಾರಂಟಿ ಮುಗಿಯುವುದಿದ್ದರೆ, ಅಂತಹ ವಾಹನಗಳಿಗೆ ಮಾತ್ರವೇ ಇದು ಅನ್ವಯ ಆಗಲಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಟಾಟಾ ಮೋಟರ್ಸ್ ಸಂಸ್ಥೆ ಕೂಡಾ ದೇಶದಾದ್ಯಂತ ಏಪ್ರಿಲ್ 1ರಿಂದ ಮೇ 31ರ ಒಳಗೆ ಮುಗಿಯಲಿರುವ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ ಎಂದು ತಿಳಿಸಿದೆ.