ಲಾಕ್ ಡೌನ್: ಸಿಟಿ ಬಸ್ ನೌಕರರಿಗೆ ಕನಿಷ್ಟ 5000ರೂ. ಪರಿಹಾರ ನೀಡಿ- ಸಿಐಟಿಯು ಒತ್ತಾಯ

ಉಡುಪಿ: ರಾಜ್ಯ ಸರಕಾರ ದಿಢೀರ್ ಘೋಷಿಸಿದ ಕರ್ಫ್ಯೂ, ಲಾಕ್ ಡೌನ್ ಗಳಿಂದಾಗಿ ಸಿಟಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗಳು ವೇತನ ರಹಿತ ರಜೆಯಲ್ಲಿದ್ದಾರೆ.‌ ಇದರಿಂದ ನೌಕರರ ಕುಟುಂಬಗಳು ಯಾವುದೇ ಆದಾಯವಿಲ್ಲದೆ ಹಸಿವಿನಿಂದ ಕಂಗೆಟ್ಟಿದೆ. ಖಾಸಗಿ ಬಸ್ಸು ಮಾಲಕರು ನೌಕರರ ನೆರವಿಗೆ ಧಾವಿಸಬೇಕು ಎಂದು ಸಿಐಟಿಯು ಗೆ ಸೇರಿದ ಉಡುಪಿ ಜಿಲ್ಲಾ ಸಿಟಿ ಬಸ್ ನೌಕರರ ಸಂಘವು ಒತ್ತಾಯಿಸಿದೆ.

ಕೊರೊನಾ ಪ್ರಥಮ ಅಲೆಯ ಸಂದರ್ಭ ಕೆಲವು ಮಾಲಕರು, ಕೆಲವು ನೌಕರರಿಗೆ ಅಲ್ಪ ಪ್ರಮಾಣದ ಸಹಾಯ ಮಾಡಿದ್ದರು. ನಂತರ ನಮ್ಮ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿಯವರು ಅದ್ಯಕ್ಷರಾಗಿದ್ದ ತುರ್ತು ಸೇವಾ ನಿದಿಯಿಂದ ಎಲ್ಲಾ ನೌಕರರಿಗೂ ಅಕ್ಕಿ ವಿತರಣೆ ಮಾಡಲಾಗಿತ್ತು. ಈಗ ಸಂತೋಷ ಪೂಜಾರಿಯವರು ಕೆಲಸ ಕಳೆದು ಕೊಂಡಿದ್ದಾರೆ. ಅವರ ರೀತಿಯಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ.  ಮಾಲಕರ ಕಡೆಯಿಂದಲೂ, ಸರಕಾರದ ಕಡೆಯಿಂದಲೂ ಪರಿಹಾರ ಸಿಗದೆ ಬಸ್ಸು ನೌಕರರು ಕುಟುಂಬ ನಡೆಸಲು ಪರದಾಡಿದ್ದರು‌.

ಲಾಕ್ ಡೌನ್ ಕೊ‌ನೆಗೊಂಡ ನಂತರವೂ ಖಾಸಗಿ ಬಸ್ಸು ಸಂಚಾರ ಆರಂಭಗೊಳ್ಳಲು ಮತ್ತಷ್ಟು ವಾರಗಳು ಕಳೆದಿದ್ದವು.  ಅಲ್ಲಿಯವರಗೆ ಅರ್ಧದಷ್ಟು ನೌಕರರಿಗೆ ಮಾತ್ರ ದುಡಿಮೆಯ ಅವಕಾಶ, ಅರ್ಧ ವೇತನವಷ್ಟೆ ದೊರಕಿದ್ದವು. ಉಳಿದವರು ನಿರುದ್ಯೋಗಿಗಳಾಗಿದ್ದರು. ಯಾವುದೇ ಆದಾಯವಿಲ್ಲದೆ ಸಾಲದ ಬಲೆಗೆ ಬಿದ್ದಿದ್ದರು. ಇದೀಗ ಮತ್ತೆ ತಿಂಗಳಿಗಿಂತ ಹೆಚ್ಚು ಕಾಲ ಖಾಸಗಿ ಬಸ್ಸುಗಳು ಸ್ಥಗಿತಗೊಂಡಿದ್ದು. ಬಸ್ಸು ನೌಕರರು ವೇತನ ರಹಿತ ರಜೆಯಲ್ಲಿ ಮನೆ ಸೇರಿದ್ದಾರೆ. ಪಿಎಫ್, ಇಎಸ್ಐ, ಬೋನಸ್, ಪಿಂಚಣಿ ಸಹಿತ ಯಾವುದೇ ಸವಲತ್ತುಗಳಿಲ್ಲದೆ ದುಡಿಯುವ, ಅಂದಂದಿನ ದುಡಿಮೆಯನ್ನೇ ಅವಲಂಬಿಸಿರುವ ಬಸ್ಸು ನೌಕರರು ಈ ದಿಢೀರ್ ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ.

ಮುಂದಕ್ಕೆ ಬಸ್ಸು ಸಂಚಾರ ಮತ್ತೆ ಮೊದಲಿನಂತಾಗುವುದು, ಉದ್ಯೋಗ, ವೇತನ ದೊರಕುವುದು ಯಾವಾಗ ? ಎಂದು ತಿಳಿಯದೆ ಅತಂತ್ರರಾಗಿದ್ದಾರೆ. ಬಹುತೇಕ ಬಾಡಿಗೆ ಮನೆಗಳಲ್ಲಿ ವಾಸ ಇರುವ ಬಸ್ಸು ನೌಕರರು,ಅವರನ್ನು  ಅವಲಂಬಿಸಿದ ಕುಟುಂಬಗಳು ಇದರಿಂದಾಗಿ ಹಸಿವಿನ ದವಡೆಗೆ ಸಿಲುಕಿವೆ. ಕೇರಳದಲ್ಲಿ ರಾಜ್ಯ ಸರಕಾರ ಎಲ್ಲಾ ನೌಕರರಿಗೂ ರೇಷನ್ ಕಿಟ್ ನೀಡಿದೆ. ಅಲ್ಲದೆ ನೌಕರರ ನೇತ್ರತ್ವದಲ್ಲಿರುವ ಸಹಕಾರಿ ಸಂಘಗಳು ಸದಸ್ಯರಿಗೆ ವಿವಿದ ರೀತಿಯಲ್ಲಿ ಸಹಾಯ ಮಾಡಿವೆ. ತಕ್ಷಣ ಸಿಟಿ ಬಸ್ಸು ಮಾಲಕರು ನೌಕರರ ಕುಟುಂಬಗಳ ರಕ್ಷಣೆಗೆ ಧಾವಿಸಬೇಕು. ಪರಿಸ್ಥಿತಿ ಸರಿ ಹೋಗುವವರೆಗೆ ಕನಿಷ್ಟ 5000/- ರೂ. ಪರಿಹಾರ ನೀಡಬೇಕೆಂದು ಉಡುಪಿ ಜಿಲ್ಲಾ ಸಿಟಿ ಬಸ್ ನೌಕರರ ಸಂಘದ ಅಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!