ಭಾರತ-ಚೀನಾ ಸಂಘರ್ಷ: ಪ್ರಧಾನಿ ಮೋದಿ ಹೇಳಿಕೆ ಸುತ್ತ ವಿವಾದ

‘ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಲ್ಲ. ನಮ್ಮ ಯಾವುದೇ ಗಡಿಠಾಣೆಯನ್ನು ಯಾರೊಬ್ಬರೂ ವಶಪಡಿಸಿಕೊಂಡಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆ ಭಾರಿ ವಿವಾದವನ್ನು ಸೃಷ್ಟಿಸಿದೆ. ಪ್ರಧಾನಿಯ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಸೇನಾ ಮುಖ್ಯಸ್ಥರು, ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವರು ನೀಡಿದ್ದ ಹೇಳಿಕೆಗಳು ಹಾಗೂ ಪ್ರಧಾನಿಯ ಹೇಳಿಕೆ ವ್ಯತಿರಿಕ್ತವಾಗಿವೆ. ಚೀನಾದ ಎದುರು ಮೋದಿ ಶರಣಾಗಿದ್ದಾರೆ ಎಂಬುದು ವಿರೋಧ ಪಕ್ಷಗಳ ಆರೋಪ. ವಿವಾದಕ್ಕೆ ಕಾರಣವಾಗಿರುವ ಈ ಎಲ್ಲಾ ಹೇಳಿಕೆಗಳ ವಿವರ ಇಲ್ಲಿದೆ

ಸಂಘರ್ಷಕ್ಕೂ ಮೊದಲ ಹೇಳಿಕೆಗಳು

ಜೂನ್ 13: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ: ‘ಪಾಂಗಾಂಗ್ ಸರೋವರ, ಡೆಮ್‌ಚೊಕ್, ದೌಲತ್‌ಬೇಗ್ ಓಲ್ಡಿ ಮತ್ತು ಗಾಲ್ವನ್ ಕಣಿವೆಯಿಂದ ಎರಡೂ ಕಡೆಯ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಕೆಲವು ಪ್ರದೇಶದಲ್ಲಿ ಚೀನಾ ಸೈನಿಕರು 1.5 ಕಿ.ಮೀ.ನಷ್ಟು ಹಿಂದಕ್ಕೆ ಸರಿದಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಕ್ಷಿಪ್ರವಾಗಿ ಆಗುತ್ತಿದೆ’.

ಜೂನ್ 14: ರಕ್ಷಣಾ ಸಚಿವ ರಾಜನಾಥ್ ಸಿಂಗ್: ‘ಲಡಾಖ್‌ನ ಎಲ್‌ಎಸಿಯಿಂದ ಎರಡೂ ಸೇನೆಯ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಭಾರತ ಮೊದಲಿನ ಹಾಗೆ ಈಗ ದುರ್ಬಲ ರಾಷ್ಟ್ರವಲ್ಲ. ನಮ್ಮ ನೆಲ ಮತ್ತು ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳುವ ಶಕ್ತಿ ನಮ್ಮಲ್ಲಿದೆ’. 

ಮಾರಣಾಂತಿಕ ಸಂಘರ್ಷ

ಜೂನ್ 15: ಸಂಜೆ ಮತ್ತು ರಾತ್ರಿಯಲ್ಲಿ ಗಾಲ್ವನ್ ಕಣಿವೆಯ ‘ಗಸ್ತು ಪಾಯಿಂಟ್‌‌ 14’ರಲ್ಲಿ ಎರಡೂ ದೇಶಗಳ ಸೈನಿಕರ ಮಧ್ಯೆ ಸಂಘರ್ಷ. ಭಾರತದ 20 ಸೈನಿಕರ ಸಾವು. ‘ಭಾರತದ ಗಡಿಯೊಳಗೆ ಬರುವ ಗಾಲ್ವನ್‌ ಕಣಿವೆಯಲ್ಲಿ ಸಂಘರ್ಷ. ಚೀನಾ ಸೈನಿಕರು ನಿರ್ಮಿಸಿದ್ದ ಡೇರೆಗಳನ್ನು ತೆರವು ಮಾಡಲು ಭಾರತೀಯ ಸೈನಿಕರು ಮುಂದಾದಾಗ ಸಂಘರ್ಷ ನಡೆದಿದೆ’ ಎಂದು ಭಾರತೀಯ ಸೇನೆ ಮಾಹಿತಿ ನೀಡಿತ್ತು.

ಜೂನ್‌ 16: ‘ಪೂರ್ವ ಲಡಾಖ್‌ನ ವಾಸ್ತವ ಗಡಿ ರೇಖೆಯಲ್ಲಿನ ಯಥಾಸ್ಥಿತಿಯನ್ನು ಚೀನಾ ಸೈನಿಕರು ಉಲ್ಲಂಘಿಸಿದ್ದಾರೆ. ಅಕ್ರಮವಾಗಿ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದನ್ನು ತೆರವು ಮಾಡುವ ವೇಳೆ ಸಂಘರ್ಷ ನಡೆದಿದೆ’ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿ ಹೇಳಿಕೆ ನೀಡಿತ್ತು.

ಜೂನ್ 16: ಚೀನಾದ ವಿದೇಶಾಂಗ ವ್ಯವಹಾರಗಳ ಕಾರ್ಯಾಲಯವು, ‘ಭಾರತೀಯ ಸೈನಿಕರು ನಮ್ಮ ಗಡಿಯನ್ನು ಎರಡು ಬಾರಿ ದಾಟಿದ್ದರು. ಅವರ ಈ ಪ್ರಚೋದನಕಾರಿ ನಡೆಯಿಂದಲೇ ಸಂಘರ್ಷ ನಡೆಯಿತು. ಈ ಸಂಘರ್ಷಕ್ಕೆ ಚೀನಾ ಕಾರಣ ಎಂದು ಯಾರೂ ದೂರಬಾರದು’ ಎಂದು ಹೇಳಿಕೆ ನೀಡಿತು.

ಜೂನ್ 17: ‘ಗಾಲ್ವನ್ ಕಣಿವೆ ಪ್ರದೇಶದಲ್ಲಿ ಎರಡೂ ದೇಶಗಳ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ವೇಳೆ ಈ ಸಂಘರ್ಷ ನಡೆದಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು.

ಜೂನ್ 17: ಸಂಘರ್ಷ ನಡೆದ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇನಾ ವಾಹನಗಳು ಇವೆ ಎಂಬುದನ್ನು ಸಾಬೀತು ಮಾಡುವ ಉಪಗ್ರಹ ಚಿತ್ರಗಳನ್ನು ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿತು.

ಮೋದಿ ಹೇಳಿಕೆಗೆ ಆಕ್ರೋಶ, ಸ್ಪಷ್ಟನೆ

ಜೂನ್ 19: ಭಾರತ–ಚೀನಾ ಗಡಿ ಸಂಘರ್ಷ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಕರೆದಿದ್ದರು. ಸಭೆಯಲ್ಲಿ ಮೋದಿ ಅವರು, ‘ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಕೊಂಡಿಲ್ಲ. ನಮ್ಮ ಯಾವುದೇ ಗಡಿಠಾಣೆಯನ್ನು ಯಾರೂ ವಶಕ್ಕೆ ಪಡೆದಿಲ್ಲ’ ಎಂದು ಘೋಷಿಸಿದ್ದರು.

ಜೂನ್ 20: ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಚೀನಾ ಸ್ವಾಗತಿಸಿತ್ತು.

ಜೂನ್ 20: ‘ಭಾರತದ ಪ್ರದೇಶಗಳನ್ನು ಪ್ರಧಾನಿಯವರು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ. ಅದು ಚೀನಾದ್ದೇ ನೆಲವಾಗಿದ್ದರೆ, ನಮ್ಮ ಸೈನಿಕರು ಹತ್ಯೆಯಾಗಿದ್ದು ಏಕೆ? ಅವರನ್ನು ಕೊಂದದ್ದು ಎಲ್ಲಿ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.

ಜೂನ್ 20: ‘ಯಾರೂ ನಮ್ಮ ನೆಲವನ್ನು ಅತಿಕ್ರಮಿಸಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಹಾಗಿದ್ದಲ್ಲಿ ಸಂಘರ್ಷ ನಡೆದದ್ದಾರೂ ಏಕೆ? ನಮ್ಮ ಸೈನಿಕರು ಸತ್ತಿದ್ದೇಕೆ ಮತ್ತು ಈ ಸರ್ವಪಕ್ಷ ಸಭೆಯನ್ನು ಏಕೆ ನಡೆಸಬೇಕಿತ್ತು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದರು.

ಜೂನ್ 21: ‘ಪ್ರಧಾನಿಯ ಹೇಳಿಕೆಯನ್ನು ಸುಮ್ಮನೆ ವಿವಾದ ಮಾಡಲಾಗುತ್ತಿದೆ. ಎಲ್‌ಎಸಿಯ ಇತ್ತ ಕಡೆ (ಭಾರತದ ನೆಲ) ಚೀನಾ ಸೈನಿಕರು ನಿರ್ಮಾಣ ಕಾರ್ಯ ಕೈಗೊಂಡಿದ್ದು ಮತ್ತು ಅದನ್ನು ತೆರವು ಮಾಡಲು ನಿರಾಕರಿಸಿದ ಕಾರಣಕ್ಕೆ ಸಂಘರ್ಷ ನಡೆದಿದೆ. ನಮ್ಮ ಸೈನಿಕರ ತ್ಯಾಗದ ಕಾರಣ ಚೀನಾ ಸೈನಿಕರು ನಮ್ಮ ನೆಲದಲ್ಲಿ ಈಗ ಇಲ್ಲ ಎಂಬ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದರು’ ಎಂದು ಪ್ರಧಾನಿ ಕಾರ್ಯಾಲಯವು ಸ್ಪಷ್ಟೀಕರಣ ನೀಡಿತು.

ಜೂನ್ 21: ‘ರಕ್ಷಣಾ ಸಚಿವರು, ವಿದೇಶಾಂಗ ಸಚಿವಾಲಯ ಮತ್ತು ಸೇನಾ ಮುಖ್ಯಸ್ಥರು ಚೀನಾ ಸೇನೆಯನ್ನು ಹಿಂದಕ್ಕೆ ಕಳುಹಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ಪ್ರಧಾನಿಯ ಹೇಳಿಕೆ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಕೊಂಡೇ ಇಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಗಾಲ್ವನ್‌ ಕಣಿವೆಯಿಂದ ಚೀನಾ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳುತ್ತಿದೆ’ ಎಂದು ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ಹೇಳಿದ್ದರು. ಪ್ರಧಾನಿ ಹೇಳಿದ್ದು ನಿಜವೇ ಆಗಿದ್ದಲ್ಲಿ, ಸಚಿವರು ಮತ್ತು ಸೇನಾ ಮುಖ್ಯಸ್ಥರು ಹೇಳಿದ್ದು ಸುಳ್ಳೇ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರಶ್ನಿಸಿದ್ದರು.

ಮನಮೋಹನ್ ಸಿಂಗ್ ಟೀಕೆ

ಜೂನ್ 22: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಯನ್ನು ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಮುಖಂಡ ಡಾ.ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

‘ದೇಶದ ಭದ್ರತೆ, ಗಡಿಗೆ ಸಂಬಂಧಿಸಿದಂತೆ ಘೋಷಣೆ ಮಾಡುವಾಗ ಮತ್ತು ಹೇಳಿಕೆ ನೀಡುವಾಗ ಬಳಸುವ ಪದಗಳ ಬಗ್ಗೆ ಪ್ರಧಾನಿಯು ಬಹಳ ಎಚ್ಚರಿಕೆ ವಹಿಸಬೇಕು. ಚೀನಾ ಅದರ ನಿಲುವನ್ನು ಸಮರ್ಥಿಸಿಕೊಳ್ಳಲು ತಮ್ಮ ಹೇಳಿಕೆಯನ್ನು ಬಳಸಿಕೊಳ್ಳದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರವಹಿಸಬೇಕು. ಈ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಇದು ಇನ್ನಷ್ಟು ಉಲ್ಬಣಿಸದಂತೆ ನೋಡಿಕೊಳ್ಳಲು ಸರ್ಕಾರದ ಎಲ್ಲಾ ಅಂಗಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ಅಪಾಯದ ಎದುರು ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾದ ಸಂದರ್ಭ ಇದು. ತಪ್ಪು ಮಾಹಿತಿ ನೀಡುವುದು ರಾಜತಾಂತ್ರಿಕ ಮತ್ತು ಪ್ರಬಲ ನಾಯಕತ್ವಕ್ಕೆ ತಕ್ಕುದ್ದಲ್ಲ ಎಂಬುದನ್ನು ಸರ್ಕಾರಕ್ಕೆ ನೆನಪಿಸಬಯಸುತ್ತೇನೆ. ಹೊಗಳಿಕೆ ಮತ್ತು ಸುಳ್ಳು ಹೇಳಿಕೆಗಳಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ದೇಶದ ಗಡಿ ರಕ್ಷಣೆಗಾಗಿ ಹುತಾತ್ಮರಾದ ಸೈನಿಕರ ತ್ಯಾಗಕ್ಕೆ ಪ್ರತಿಫಲ ದೊರೆಯುವಂತೆ ಸರ್ಕಾರ ನೋಡಿಕೊಳ್ಳಬೇಕು. ಇವುಗಳಲ್ಲಿ ಏನು ಕಡಿಮೆಯಾದರೂ, ಅದು ದೇಶದ ಜನರಿಗೆ ಬಗೆದ ಐತಿಹಾಸಿಕ ದ್ರೋಹವಾಗುತ್ತದೆ’ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ಜೂನ್ 22: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ: ‘2010–2013ರಲ್ಲಿ ಚೀನಾವು ಭಾರತದ ನೂರಾರು ಚದರ ಕಿ.ಮೀ. ನೆಲವನ್ನು ಅತಿಕ್ರಮಿಸಿಕೊಳ್ಳುವಾಗ ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಇಷ್ಟು ತಲೆಕೆಡಿಸಿಕೊಳ್ಳಬೇಕಿತ್ತು ಎಂದು ನಾನು ಬಯಸುತ್ತೇನೆ’ ಎಂದು ನಡ್ಡಾ ತಿರುಗೇಟು ನೀಡಿದ್ದಾರೆ.

ಗಾಲ್ವನ್ ಕಣಿವೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜಮೆ ಆಗಿರುವ ಸೇನಾ ವಾಹನಗಳು. ಈ ಉಪಗ್ರಹ ಚಿತ್ರವನ್ನು ಜೂನ್ 16ರ ಮಧ್ಯಾಹ್ನ ತೆಗೆಯಲಾಗಿದೆ. ಸಂಘರ್ಷ ನಡೆದ ಮರುದಿನವೂ (ಜೂನ್ 15) ಸೇನಾ ವಾಹನಗಳು ಅಲ್ಲಿದ್ದವು. ಪ್ಲಾನೆಟ್‌ ಲ್ಯಾಬ್ಸ್ ಈ ಚಿತ್ರವನ್ನು ಬಿಡುಗಡೆ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!