ಸರಕಾರ ವೈಫಲ್ಯಗಳ ದಿಕ್ಕು ತಪ್ಪಿಸಲು ಶ್ರೀನಿವಾಸ್ ಮೇಲೆ ತನಿಖೆಯ ಆದೇಶ: ದೀಪಕ್ ಕೋಟ್ಯಾನ್
ಉಡುಪಿ ಮೇ.16 : ಕೋವಿಡ್ ಪರಿಹಾರ ಕಾರ್ಯಗಳಲ್ಲಿ ದೇಶದಾದ್ಯಂತ ಗುರುತಿಸಿಕೊಂಡಿರುವ ಇಂಡಿಯನ್ ಯುತ್ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರನ್ನು ದೆಹಲಿ ನಗರದ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಸರಕಾರ ತಮ್ಮ ವೈಫಲ್ಯ ಗಳನ್ನು ಮುಚ್ಚಿಡಲು ಶ್ರೀನಿವಾಸ್ ಅವರ ಮೇಲೆ ತನಿಖೆಯ ಆದೇಶ ಮಾಡಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಹೇಳಿದ್ದಾರೆ.
ಈ ವಿಚಾರವನ್ನು ಖಂಡಿಸಿರುವ ಅವರು, ಕೋವಿಡ್ ಔಷಧಿಗಳ ಅಕ್ರಮ ಕಾನೂನುಬಾಹಿರ ವಿತರಣೆಯ ಆರೋಪದ ಹಿನ್ನಲೆಯಲ್ಲಿ ಐವೈಸಿ ಕಛೇರಿಗೆ ತೆರಳಿ ದೆಹಲಿ ಪೊಲೀಸರು ವಿಚಾರಣೆ ನಡೆಸಿರುವುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದ್ದಾರೆ.
ಮೋದಿ ಸರಕಾರದ ಬಗ್ಗೆ ಧ್ವನಿ ಎತ್ತಿದ ಯುವ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ತನಿಖೆ ಮೂಲಕ ಅವರ ಜನಸೇವೆಗೆ ಅಡ್ಡಗಟ್ಟುವ ಸಂಪೂರ್ಣ ಪ್ರಯತ್ನ ಸರಕಾರ ನಡೆಸುತ್ತಿದೆ ಎಂದಿದ್ದಾರೆ.
ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತಾ. ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡಿದ್ದ ಶ್ರೀನಿವಾಸ್ ರವರ ಕಾರ್ಯಕ್ಕೆ ಬಿಜೆಪಿ ಸರಕಾರ ತನಿಖೆಯ ನೇಪವೊಡ್ಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ ಎಂದರು.
ಬಿಜೆಪಿ ಶಾಸಕರ ಬೆಡ್ ಬ್ಲಾಕಿಂಗ್ ದಂಧೆ ಬಯಲಾಗುತ್ತಿದ್ದಂತೆ ತಮ್ಮ ನಾಯಕರ ಭ್ರಷ್ಟತೆ ಮುಚ್ಚಿ ಹಾಕಲು ಸರಕಾರ ಕೇಂದ್ರದ ನೆರವು ಪಡೆದಂತಿದೆ. ತಮ್ಮ ಸರಕಾರ ವೈಫಲ್ಯಗಳ ಕುರಿತು ದಿಕ್ಕು ತಪ್ಪಿಸಲು ಶ್ರೀನಿವಾಸ್ ಮೇಲೆ ತನಿಖೆಯ ಆದೇಶ ಹೊರಡಿಸ ಲಾಗಿದೆ ಎಂದು ಅವರು ಹೇಳಿದರು.