ತೌಕ್ತೆ ಚಂಡಮಾರುತ- 36 ಮನೆಗಳಿಗೆ ಹಾನಿ, 60 ಮಂದಿ ಸುರಕ್ಷಿತ ಸ್ಥಳಕ್ಕೆ- ಇಂದೂ ಕೂಡಾ ರೆಡ್ ಅಲರ್ಟ್!

ಉಡುಪಿ ಮೇ.16(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವ ಜನ ಜೀವನದ ಮೇಲೆ ತುಂಬಾ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಪಾಸ್ತಿಗಳು ಹಾನಿಯಾಗಿದ್ದು ಈ ಬಗ್ಗೆ ವರದಿ ತಯಾರಿಸಿ ಸರಕಾರಕ್ಕೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. 

ಇಂದು ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಹಾನಿ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಹಾನಿಯಾದ ಪ್ರದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ಸರಿಯಾದ ಕ್ರಮ ಕೈಗೊಂಡು ಹಾನಿ ಪ್ರಮಾಣದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ 36 ಮನೆಗಳಿಗೆ ಹಾನಿಯಾಗಿದೆ. ಇನ್ನು ಹಾನಿಯ ಪ್ರಮಾಣ ಕುರಿತು ಅಂದಾಜು ಮಾಡಿ ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಮೀನುಗಾರಿಕಾ ರಸ್ತೆಗಳಿಗೆ ಅಪಾರ ಹಾನಿಯಾಗಿದ್ದು ಈ ಬಗ್ಗೆ ಬಂದರು ಅಧಿಕಾರಿಗಳಿಗೆ ರಸ್ತೆ ಹಾನಿಯ ಪ್ರಮಾಣದ ವರದಿಯನ್ನು ಸಂಜೆ ಒಳಗೆ ನೀಡುವಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ ‌ ಜಿಲ್ಲೆಯಲ್ಲಿ ಮೆಸ್ಕಾಂ ಇಲಾಖೆಗೆ ಹೆಚ್ಚಿನ ಹಾನಿಯಾಗಿದ್ದು, ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿದೆ.ಹಾನಿಗೊಳಗಾದ ವಿದ್ಯುತ್ಕಂಬಗಳನ್ನು ಹಾಗೂ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಪಿಡಬ್ಲ್ಯು ಡಿ, ಪಿಆರ್ ಇಡಿ ರಸ್ತೆಗಳಿಗೂ ಸುಮಾರು ಹಾನಿಯಾಗಿದೆ. ಇದರೊಂದಿಗೆ ತೋಟಗಾರಿಕೆ ಬೆಲೆಗಳಿಗೆ ಹಾನಿಯಾಗಿದ್ದು, ಸಮುದ್ರದ ಅಕ್ಕ ಪಕ್ಕದ ರಸ್ತೆಗಳಿಗೆ ಕಡಲ್ಕೊರೆತದಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು, ಅನೇಕ ತೆಂಗಿನ ಮರಗಳಿಗೂ ಹಾನಿಯಾಗಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆಗೆ ಮಾಹಿತಿ ನೀಡಿದ್ದು ಈ ಬಗ್ಗೆ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.

ನಿನ್ನೆ ಸುಮಾರು 60 ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ತಿಳಿಸಿದ್ದು, ಜಿಲ್ಲೆಯಲ್ಲಿ 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಯಾರಾದರೂ ತುರ್ತು ಸಂದರ್ಭದಲ್ಲಿ ಈ ಕೇಂದ್ರದಲ್ಲಿ ರಕ್ಷಣೆ ಪಡೆಯಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ ಈ ಗಾಲೇ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿರುವ 60 ಮಂದಿ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದು ಕೇಂದ್ರದಲ್ಲಿ ಅವರು ರಕ್ಷಣೆ ಪಡೆದಿಲ್ಲ ಎಂದು ತಿಳಿಸಿದರು.

ಇನ್ನು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅದನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಯಾವುದೇ ಜೀವ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇನ್ನು ಕೆಲವು ಕಡೆ ಬೋಟ್ ಗಳಿಗೆ ಹಾನಿಯಾಗಿರುವ ವರದಿಯಾಗಿದೆ. ನೆರೆಯ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಗೆ ಅತೀ ಹತ್ತಿರದಲ್ಲಿ ಚಂಡಮಾರುತ ಹಾದು ಹೋಗಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಸದ್ಯ ಚಂಡಮಾರುತ ಮಹಾರಾಷ್ಟ್ರ ಗಡಿಯಲ್ಲಿ ಇದ್ದು ಜಿಲ್ಲೆಯಲ್ಲಿ ಇಂದೂ ಕೂಡಾ ರೆಡ್ ಅಲರ್ಟ್ ಮುಂದುವರೆಯಲಿದೆ  ಹಾಗೂ ಇಂದೂ ಕೂಡಾ ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಅಧಿಕಾರಿಗಳನ್ನು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. 

ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಜನರ ನೆರವಿಗೆ ತೆರಳಬೇಕು ಹಾಗೂ ಯಾವುದೇ ಹಾನಿ ಸಂಭವಿಸಿದಲ್ಲಿ ಆ ಬಗ್ಗೆ ವರದಿ‌ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಸದ್ಯ ಜಿಲ್ಲೆಯಲ್ಲಿ ಕೊರೋನಾ ಸಂಕಷ್ಟ ಇರುವುದರಿಂದ ಪುನರ್ವಸತಿ ಕೇಂದ್ರದಲ್ಲಿ ಒಂದೊಂದು ಕುಟುಂಬವನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸುವಂತೆ ಸೂಚನೆ ನೀಡಲಾಗಿದೆ. ಕೊರೋನಾ ಬಾದಿತ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯೂ ಒಂದಾಗಿರುವುದರಿಂದ ಕೋವಿಡ್ ಮುನ್ನೆಚ್ಚರಿಕೆಯನ್ನು ತೆಗೆದು ಕೊಂಡೇ ಪುನರ್ವಸತಿ ಕೇಂದ್ರವನ್ನು ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ನೆರೆ ಬಂದಿರುವ ಪ್ರದೇಶದಲ್ಲಿ ಸಾರ್ವಜನಿಕ ರು ಕೊರೋನಾವನ್ನು ಮರೆಯಬಾರದು. ಕೊರೋನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇದೇ ವೇಳೆ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ 10 ದಿನಗಳಲ್ಲಿ ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರ ಸರಿಸುಮಾರು 33 ಶೇ. ದಷ್ಟು ಇದೆ. ಇದನ್ನು ಕಡಿಮೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ 63 ಕಂಟೋನ್ಮೆಂಟ್ ಝೋನ್ ನ್ನು ಮಾಡಲಾಗಿದೆ  ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಮಾಡುವ ಸಂಖ್ಯೆ ಯನ್ನು ಹೆಚ್ಚಿಸಲಾಗಿದೆ. ಯಾವುದೇ ಕೋವಿಡ್ ರೋಗ ಲಕ್ಷಣಗಳು ಕಂಡು ಬಂದರೆ ಅಂತವರು ಮನೆಯಲ್ಲಿ ಮನೆ ಮದ್ದು ಮಾಡುವ ಬದಲು ಆಸ್ಪತ್ರೆಗಳಿಗೆ ಬಂದು ಪರೀಕ್ಷೆ ಮಾಡಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!