ಯುಪಿಸಿಎಲ್ ಸ್ಥಾವರದಿಂದ ಮಾಲಿನ್ಯ: ತಪ್ಪು ಮಾಹಿತಿ ನೀಡಿದ ಪರಿಸರ ಇಲಾಖೆ- ಎಲ್ಲೂರು ಗ್ರಾ.ಪಂ ಅಧ್ಯಕ್ಷ ಆಕ್ರೋಶ

ಪಡುಬಿದ್ರಿ, ಮೇ 16: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಉಂಟಾಗುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿ ಕೈಗೊಂಡಿರುವ ಕ್ರಮದ ಬಗ್ಗೆ ಕೇಳಿದ ಮಾಹಿತಿಗೆ ಪರಿಸರ ಇಲಾಖೆಯಿಂದ ಬಂದ ಉತ್ತರಕ್ಕೆ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್‌ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಾವರದಿಂದ ಉಂಟಾಗುತ್ತಿರುವ ವಿವಿಧ ಮಾಲಿನ್ಯದಿಂದ‌ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಲ್ಲಿ ಹಲವು ಸಮಯದಿಂದ  ಅನಾರೋಗ್ಯ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಪರಿಹಾರಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾ.19ರಂದು ಪರಿಸರ ಇಲಾಖೆಗೆ ಪತ್ರ ಬರೆದು ಮಾಹಿತಿ ಕೇಳಲಾಗಿತ್ತು.

ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಣಿಪಾಲ ಪ್ರಾದೇಶಿಕ ಕಚೇರಿ, ಎ.24ರಂದು ನೀಡಿದ ಉತ್ತರದಲ್ಲಿ ಯೋಜನೆಯಿಂದ ಪರಿಸರದ ಮೇಲಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಕೇಳಿದ ಮಾಹಿತಿಗೆ ಇಲಾಖೆ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ (2020ರ ಜನವರಿಯಿಂದ 2021ರ ಜನವರಿ) ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ ಎಂದು ಉತ್ತರಿಸಲಾಗಿದೆ. ಅಲ್ಲದೆ ಜಲಮಾಲಿನ್ಯದ ಬಗ್ಗೆ ಕಂಪೆನಿಯ ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಅಂತರ್ಜಲದ (ಕೊಳವೆ ಬಾವಿ, ತೆರೆದ ಬಾವಿ, ನದಿ ನೀರು ಹಾಗೂ ಸಮುದ್ರ ನೀರು) ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲಾಗುತಿದ್ದು, ಇದರಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡುಬಂದಿಲ್ಲ ಎಂದು ಉತ್ತರಿಸಲಾಗಿದೆ. 
ಇನ್ನು ಶಬ್ದ ಮಾಲಿನ್ಯದ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಎಲ್ಲ ಎಂದು ಹೇಳಲಾಗಿದೆ.

ಇದರೊಂದಿಗೆ ಕಂಪೆನಿಯ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಒಯ್ಯುವ ಪೈಪ್‌ಲೈನ್ ಒಡೆದು ಬಹುಕಾಲ ಕಳೆದರೂ, ಇದರಿಂದ ಪರಿಸರದ ಮೀನುಗಾರರಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ದೂರಿದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಕೇಳಿದ ಪ್ರಶ್ನೆಗೆ, ಕಲುಷಿತ ನೀರನ್ನು ಬ್ರೇಕ್‌  ವಾಟರ್ ಮೂಲಕ ಎರಡು ಪ್ರತ್ಯೇಕ ಕೊಳವೆಗಳಲ್ಲಿ ಒಯ್ಯಲಾಗುತಿದ್ದು, ಇದರಲ್ಲಿ ಒಂದು ಕೊಳವೆ ಅಲೆಗಳ ಹೊಡೆತಕ್ಕೆ ತುಂಡಾಗಿದ್ದು ಅದರ ದುರಸ್ತಿ ಕಾರ್ಯ ನಡೆಯುತ್ತಿದೆ. ಕಂಪೆನಿ ಈಗ ಕಲುಷಿತ ನೀರನ್ನು ಇನ್ನೊಂದು ಕೊಳವೆಯ ಮೂಲಕ ಸಮುದ್ರಕ್ಕೆ ಬಿಡುತ್ತಿದೆ ಎಂದು ಲಿಖಿತ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇದೀಗ ಎಲ್ಲೂರು ಗ್ರಾಪಂ ಕೇಳಿದ ಮಾಹಿತಿಗೆ ಜಿಲ್ಲಾ ಪರಿಸರ ಅಧಿಕಾರಿ ನೀಡಿರುವ ಲಿಖಿತ ರೂಪದ ಉತ್ತರ, ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇದು ನೈಜಸ್ಥಿತಿಯನ್ನು ಮುಚ್ಚಿಟ್ಟು ಕಣ್ಣೊರೆಸುವ ತಂತ್ರದಂತೆ ಕಂಡುಬರುತ್ತಿದೆ. ಇಲಾಖೆ ಯುಪಿಸಿಎಲ್ ಕಂಪೆನಿಯ ಯಾವುದೋ ಆಮಿಷಕ್ಕೆ ಒಳಗಾಗಿ ನೀಡಿದಂತಿದ್ದು, ನಿಜಸ್ಥಿತಿಯನ್ನು ಸಂಪೂರ್ಣವಾಗಿ ಮರೆಮಾಚುವಂತಿದೆ ಎಂದು ಅವರು ತಿಳಿಸಿದ್ದಾರೆ.ಅಲ್ಲದೆ ಪರಿಸರ ಇಲಾಖೆ ನೀಡಿರುವ ಮಾಹಿತಿಗಳು ಸಂಪೂರ್ಣವಾಗಿ ಕಂಪೆನಿ ಪರವಾಗಿದ್ದು, ವರದಿಯಲ್ಲಿ ಸಂಪೂರ್ಣ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ. ಜಿಲ್ಲೆಯ ಪರಿಸರ ಅಧಿಕಾರಿ ನೀಡಿರುವ ತಪ್ಪು ಮಾಹಿತಿಯ ವರದಿಯನ್ನು ಹಸಿರು ಪೀಠದ ಮುಂದೆ ಶೀಘ್ರವೇ ಮಂಡಿಸುವುದಾಗಿ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ  ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದು ಅವರು ಸ್ಥಳಕ್ಕೆ ಬಂದರೆ ಯೋಜನೆಯಿಂದ ಆಗುತ್ತಿರುವ ಮಾಲಿನ್ಯವನ್ನು ಆಧಾರ ಸಹಿತವಾಗಿ ತೋರಿಸಲು ಸಿದ್ಧನಿರುವುದಾಗಿ ಅವರು ಸವಾಲು ಹಾಕಿದ್ದಾರೆ. 

ಇನ್ನು ಯೋಜನೆಯಲ್ಲಿ ಇದುವರೆಗೆ ವಿದೇಶಿ ಕಲ್ಲಿದ್ದಲು ಬಳಸುತ್ತಿದ್ದುದರಿಂದ ಮಾಲಿನ್ಯ ಭಾಗಶ: ಕಡಿಮೆ ಇತ್ತು ಆದರೆ, ಇದೀಗ ಕಂಪೆನಿ ದೇಶೀಯ ಕಲ್ಲಿದ್ದನ್ನು ಬಳಸಿ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದ್ದು,‌ ಇದರಿಂದ ಆಸುಪಾಸಿನ ಪರಿಸರ, ನೆಲ, ಜಲ, ವಾಯು ಮಾಲಿನ್ಯದೊಂದಿಗೆ ಜನರ ಜೀವನ ಕಷ್ಟ ಕರವಾಗಲಿದೆ. ಈ ಬಗ್ಗೆ ಪರಿಸರ ಅಧಿಕಾರಿಯವರನ್ನು ಪ್ರಶ್ನಿಸಿದಾಗ, ಕಂಪೆನಿಗೆ ದೇಶೀಯ ಕಲ್ಲಿದ್ದಲನ್ನು ಬಳಸಲು ಕೇಂದ್ರ ಸರಕಾರದ ಅನುಮತಿ ದೊರೆತಿದೆ ಎಂದು ಹೇಳಿರುವುದಾಗಿ ಅವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!