ಎಸ್’ಸಿಡಿಸಿಸಿ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಕೋವಿಡ್‌ಗೆ ಬಲಿ

ಕುಂದಾಪುರ: ಕೊರೊನಾ ಸೋಂಕಿನ ಮೊದಲ ಲಸಿಕೆ ಪಡೆದಿದ್ದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಸೈಬರಕಟ್ಟೆಯ ಶಾಖಾ ವ್ಯವಸ್ಥಾಪಕ ವಂಡ್ಸೆ ಜಯರಾಜ್ ಶೆಟ್ಟಿ (46) ಕೋವಿಡ್‌ಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಶನಿವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಜಯರಾಜ್ ಶೆಟ್ಟಿಯವರು ಎಸ್.ಸಿ.ಡಿ.ಡಿ.ಸಿ.ಸಿ. ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷರಾಗಿ, ವಂಡ್ಸೆ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನೌಕರರನ್ನು ಸಂಘಟಿಸಿ ತನ್ನ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದಲ್ಲಿ ಬೃಹತ್ ಸಮಾವೇಶ ನಡೆಸಿದ್ದರು. ವಂಡ್ಸೆಯಲ್ಲಿ ಸ್ನೇಹಿತರೊಡಗೂಡಿ ಸಾಯಿ ಕಲ್ಚರಲ್ & ಸ್ಫೋರ್ಟ್ಸ್ ಕ್ಲಬ್ ಸ್ಥಾಪಿಸಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದರು.
ಮೃತರ ಅಂತ್ಯಕ್ರೀಯೆ ವಂಡ್ಸೆಯ ಅವರ ಮನೆ ಸಮೀಪ ಕೋವಿಡ್ ಮಾರ್ಗಸೂಚಿಯಂತೆ ನಡೆಯಿತು. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.