ಟೌಕ್ತೆ ಚಂಡಮಾರುತ: 50 ಕುಟುಂಬ ಸ್ಥಳಾಂತರ
ಮಂಗಳೂರು: ಟೌಕ್ತೆ ಚಂಡಮಾರುತ ಕರ್ನಾಟಕ ಕರಾವಳಿಗೆ ಅಪ್ಪಳಿಸಿದ್ದು, ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಳೆ, ಪ್ರವಾಹ ಸಂಬಂಧಿತ ಅನಾಹುತ ತಡೆಗೆ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಆಗಮಿಸಿದೆ. ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿಯಿಂದಲೆ ಮಳೆ ಆರಂಭವಾಗಿದ್ದು ಶನಿವಾರವೂ ಮುಂದುವರೆದಿದೆ. ಮಳೆಯ ಜೊತೆಗೆ ಬಲವಾದ ಗಾಳಿಯಿಂದಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಸೋಮೇಶ್ವರ ಮತ್ತು ಉಲ್ಲಾಳದಲ್ಲಿ ಸಮುದ್ರಕ್ಕೆ ಸಮೀಪದಲ್ಲಿರುವ ಹಲವಾರು ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ಸೋಮೇಶ್ವರದಲ್ಲಿ 14 ಕುಟುಂಬಗಳನ್ನು ಮದರಸಾದಲ್ಲಿ ತೆರೆಯಲಾದ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನೂ 8 ಕುಟುಂಬಗಳನ್ನು ಉಲ್ಲಾಳದಲ್ಲಿರುವ ಸರ್ಕಾರಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತರ ಕುಟುಂಬಗಳನ್ನು ಪಣಂಬೂರು, ಮುಲ್ಕಿ ಮತ್ತು ಇತರ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ.
ಸ್ಥಳಾಂತರಿಸಿದ ಅನೇಕ ಜನರು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳೂರು ತಾಲ್ಲೂಕಿನಲ್ಲಿ ಮಾತ್ರ ಜಿಲ್ಲಾಡಳಿತ 20ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆದಿದೆ ಎಂದು ಅವರು ಹೇಳಿದ್ದಾರೆ.
ಚಂಡಮಾರುತದಿಂದ ಹಾನಿಗೊಳಗಾದ ಮೊಗವೀರಪಟ್ನ, ಬಟ್ಟಪ್ಪಾಡಿ, ಸೋಮೇಶ್ವರ ಹಿಂದೂ ರುದ್ರಭೂಮಿ ಹಾಗೂ ಸೋಮೇಶ್ವರದ ಮೋಹನ್ ಎಂಬವರ ಮನೆಗೆ ಭೇಟಿ ನೀಡಿದ ನಂತರ ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವ ಸ್ಥಾನ ಸಿಕ್ಕಿ ಕೇವಲ ಎರಡೂವರೆ ತಿಂಗಳಾಗಿದ್ದು, ಖಾತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇನೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನೆಯನ್ನೂ ಜೊತೆಗೆ ನಡೆಸುತ್ತಿದ್ದೇನೆ. ಮಂಗಳೂರಿನ ಹಳೇ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ರೂ.23 ಕೋಟಿ ಅನುದಾನ ಸ್ಥಗಿತಗೊಂಡಿತ್ತು.ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ” ಎಂದರು.
ಇನ್ನು “ಇದೀಗ ಚಂಡಾಮಾರುತದಿಂದ ಉಳ್ಳಾಲ ಭಾಗದಲ್ಲಿ ವ್ಯಾಪಕ ನಷ್ಟ ಉಂಟಾಗಿದ್ದು, ಹಲವು ಕುಟುಂಬಗಳು ಮನೆಗಳನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಸರಕಾರ ತಾತ್ಕಾಲಿಕವಾಗಿ ಬೇರೆ ಮನೆಗಳಿಗೆ ಸ್ಥಳಾಂತರಗೊಳಿಸುವಂತೆ ಸೂಚಿಸಿದೆ. ಮನೆ ಕಳೆದುಕೊಂಡ ಕುಟುಂಬದವರಿಗೆ ಮನೆಗಳನ್ನು ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ಸಂಬಂಧಿಸಿದ ಬಂದರು ಇಲಾಖೆಯ ನಿರ್ದೇಶಕ ಸ್ವಾಮಿ ಹಾಗೂ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ ಅವರನ್ನು ಉಳ್ಳಾಲ ಪ್ರದೇಶಕ್ಕೆ ಸೋಮವಾರ ಭೇಟಿ ನೀಡುವಂತೆ ಸೂಚಿಸಿದ್ದೇನೆ. ವರದಿ ಸಂಗ್ರಹಿಸಿದ ಎರಡೇ ದಿನಗಳಲ್ಲಿ ತೀರ್ಮಾನ ತೆಗೆದು ಕೊಳ್ಳುತ್ತೇವೆ. ಕೊರೊನಾ ನಡುವೆ ಸರಕಾರ ಚಂಡಾಮಾರುತದ ಕಡೆಯೂ ಗಮನ ಹರಿಸಬೇಕಿದೆ. ಮುಖ್ಯಮಂತ್ರಿಯವರ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇನೆ. ಹಿಂದಿನ ಕಾಮಗಾರಿಗಳಿಗೆ ಅನುದಾನ ಮಂಜೂರಾಗದಿರುವ ಕುರಿತು ಬಂದರು ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಇನ್ನೂ ಕೆಲ ದಿನಗಳಮಟ್ಟಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.