ಕರಾವಳಿಗೆ ತಟ್ಟಿದ ತೌಖ್ತೆ ಚಂಡಮಾರುತ, ಓರ್ವರ ಸಾವು- ಆತಂಕದಲ್ಲಿ ಜನತೆ
ಉಡುಪಿ ಮೇ.15(ಉಡುಪಿ ಟೈಮ್ಸ್ ವರದಿ): ಚಂಡಮಾರುತದಿಂದ ಉಡುಪಿ ಜಿಲ್ಲೆಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದ್ದು, ಶನಿವಾರ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಿಗೆ, ಬೈಂದೂರು ತಾಲೂಕಿನಲ್ಲಿ 3 ಮನೆಗಳಗೆ, 5 ತಾತ್ಕಾಲಿಕ ಶೆಡ್‌ಗಳಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದ್ದು, ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಗಾಳಿಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿರುತ್ತಾರೆ.
ಜಿಲ್ಲೆಯಾದ್ಯಂತ ಸುಮಾರು 50 ತೆಂಗಿನಮರಗಳಿಗೆ ಹಾನಿಯಾಗಿದ್ದು, ಮರಗಳು ಧರೆಗೆ ಉರುಳಿರುವುದರಿಂದ ಅಲ್ಲ. ರಸ್ತೆ ಕಡಿತವಾಗಿದೆ.
ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ, ಕುಂದಾಪುರ ತಾಲೂಕಿನ 7 ಕುಟುಂಬಗಳನ್ನು ಸಂಬಂಧಿಕರ ಮನೆಗೆ, ಕಾಪು ತಾಲೂಕಿನ ಒಂದು ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಮತ್ತು ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಮಾರು 50 ರಿಂದ 60 ಜನಗಳಿಗೆ ಪರಿಸ್ಥಿತಿ ಅವಲೋಕಿಸಿ ಕೋಡಿ ಶಾಲೆಯಲ್ಲಿ ತೆರೆದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಈಗಾಗಲೇ ಜನರಿಗೆ ತಿಳಿಹೇಳಲಾಗಿದೆ ಹಾಗೂ ಉಡುಪಿ ಕಾಪುವಿನಲ್ಲಿ ಈಗಾಗಲೇ ಸಮುದ್ರ ತೀರದ ಜನಗಳಿಗೆ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿರುತ್ತದೆ.
ತೌಕೆ ಚಂಡಮಾರುತದ ಪ್ರಭಾವದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಉಡುಪಿ ನಗರ, ಕಾಪು, ಹೆಬ್ರಿ, ಕಾರ್ಕಳದ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದ್ದು ಕೆಲವು ಕಡೆಯಲ್ಲಿ ರಸ್ತೆಯೆಲ್ಲಾ ನೀರು ತುಂಬಿ ಕೆಲಸರುಮಯವಾಗಿದೆ.
ಪಡುಕೆರೆ, ಮಲ್ಪೆ, ಕಾಪು ಸಮುದ್ರ ತೀರದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಅಲೆಗಳು ತೀರ ದಾಟಿ ರಸ್ತೆಯಾಚೆಗೆ ಬಂದು ಅಪ್ಪಳಿಸುತ್ತಿದೆ.
ಇನ್ನು ಮಲ್ಪೆಯಲ್ಲಿ ಎರಡು ದೋಣಿಗೆ ಹಾನಿಯಾಗಿದೆ. ದೋಣಿಗಳು ಸಮುದ್ರ ತೀರದಲ್ಲಿ ಲಂಗರು ಹಾಕಿದ್ದು, ಕೆಲವೊಂದು ದೋಣಿಗಳನ್ನು ಸ್ಥಳೀಯರು ಸೇರಿ ದಡದಿಂದ ಎಳೆದು ತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರೆ ಮತ್ತೆ ಕೆಲವು ದೋಣಿಗಳನ್ನು ಕ್ರೇನ್ ಮುಖಾಂತರ ಸ್ಥಳಾಂತರಿಸಲಾಯಿತು.
ಇನ್ನು ಸಮಯದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು ತೀರ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಈ ನಡುವೆ ಸಮುದ್ರತೀರದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಪುನರ್ವಸತಿ ಕೇಂದ್ರವನ್ನು ತೆರೆಯಲು ಈಗಾಗಲೇ ತಹಶಿಲ್ದಾರರಿಗೆ ಸೂಚಿಸಿದ್ದು, ತೀರ ಪ್ರದೇಶ ಜನರು ತುರ್ತು ಸಂದರ್ಭದಲ್ಲಿ ಈ ಪುನರ್ವಸತಿ ಕೇಂದ್ರಗಳಿಗೆ ತೆರಳಿ ರಕ್ಷಣೆ ಪಡೆಯುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದ್ದಾರೆ.